ADVERTISEMENT

50 ವರ್ಷಗಳ ಹಿಂದೆ: ಗುರುವಾರ, 17–12–1970

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 19:30 IST
Last Updated 16 ಡಿಸೆಂಬರ್ 2020, 19:30 IST
   

ಕರ್ನಾಟಕ ವಿ.ವಿ ಉಪಕುಲಪತಿ ಚುನಾವಣೆ: ಕೈ ಹಾಕದಿರಲು ಸಚಿವರಿಗೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು, ಡಿ. 16–
ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಚುನಾವಣೆಯಲ್ಲಿ ತೊಡಗಬಾರದೆಂದು ತಮ್ಮ ಸಹೋದ್ಯೋಗಿ ಸಚಿವರುಗಳಿಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಸ್ಪಷ್ಟಪಡಿಸಿದ್ದಾರೆ.

ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಇಂದು ಶ್ರೀ ಪಾಟೀಲರು ‘ಉಪಕುಲಪತಿಯ ಚುನಾವಣೆಯಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ಆಸಕ್ತಿ ಇಲ್ಲ. ಸರ್ಕಾರ ಯಾವ ಅಭ್ಯರ್ಥಿಗೂ ಬೆಂಬಲ ನೀಡಿಲ್ಲ. ಯಾರು ಚುನಾಯಿತರಾದರೂ ಅವರಿಗೆ ಸರ್ಕಾರದ ಪೂರ್ಣ ಬೆಂಬಲ ದೊರಕುತ್ತದೆ’ ಎಂದರು.

ಉಪಚುನಾವಣೆಯಲ್ಲಿ ತೊಡಗಿಕೊಳ್ಳಬಾರದೆಂದು ಎಲ್ಲ ಮಂತ್ರಿಗಳಿಗೂ ತಾವು ತಿಳಿಸಿರುವುದಾಗಿ ಹೇಳಿ, ‘ಯಾರಾದರೂ ತೊಡಗಿದ್ದರೆ ಅದು ದುರದೃಷ್ಟಕರ. ಈವರೆಗೆ ಅಂತಹುದು ನನ್ನ ಗಮನಕ್ಕೆ ಬಂದಿಲ್ಲ’ ಎಂದರು.

ADVERTISEMENT

ಅಗತ್ಯವೆನಿಸಿದರೆ ಸಂವಿಧಾನ ತಿದ್ದುಪಡಿ ಖಚಿತ: ಇಂದಿರಾ
ನವದೆಹಲಿ, ಡಿ. 16–
ಸಂವಿಧಾನವನ್ನು ಬದಲಾಯಿಸುವುದು ಅಗತ್ಯವೆಂದು ಕಂಡುಬಂದರೆ ‘ಖಂಡಿತ ಅದನ್ನು ಮಾಡುತ್ತೇವೆ’ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ರಾಜ್ಯಸಭೆಯಲ್ಲಿ ಹೇಳಿದರು.

‘ಸಂವಿಧಾನ ಜಡವಾದುದಲ್ಲ. ಇತರ ರಾಷ್ಟ್ರಗಳಲ್ಲಿ, ಭಾರತದಲ್ಲೂ ಅದನ್ನು ಬದಲಾಯಿಸಲಾಗಿದೆ’ ಎಂದು ಅವರು ನುಡಿದರು.

ರಾಜಧನಕ್ಕೆ ಸಂಬಂಧಿಸಿದ ರಾಷ್ಟ್ರಪತಿ ಆಜ್ಞೆಯನ್ನು ಸರ್ವೋಚ್ಚ ನ್ಯಾಯಾಲಯವು ಅಕ್ರಮವೆಂದು ಸಾರಿರುವುದರಿಂದ ‘ಸರ್ಕಾರಕ್ಕೆ ಸೋಲಾಗಿದೆ’ ಅಥವಾ ‘ಸರ್ಕಾರ ಸಂದಿಗ್ಧದಲ್ಲಿ ಸಿಕ್ಕಿಕೊಂಡಿದೆ’ ಎಂಬ ವಿರೋಧ ಪಕ್ಷದ ವಾದವನ್ನು ಅವರು ಉಗ್ರವಾಗಿ ಪ್ರತಿಭಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.