50 ವರ್ಷಗಳ ಹಿಂದೆ
ನವದೆಹಲಿ, ಏ. 28– ಕಳೆದ ಆರು ತಿಂಗಳಲ್ಲಿ ಸಾಮಾನ್ಯ ಬೆಲೆ ಮಟ್ಟ ಇಳಿಮುಖವಾಗುತ್ತಿದ್ದರೂ ಬೆಲೆ ಸ್ಥಿರತೆ ಸಾಧಿಸಲು ಮುಂದಿನ ವರ್ಷದಲ್ಲಿ ದೃಢ ಪ್ರಯತ್ನಗಳು ಅವಶ್ಯವೆಂದು ಅಧಿಕೃತ ವಲಯಗಳು ಭಾವಿಸಿವೆ.
ರಾಷ್ಟ್ರದಲ್ಲಿನ ಬೆಲೆ ಪರಿಸ್ಥಿತಿ ಕುರಿತು ಹಣಕಾಸು ಸಚಿವ ಶಾಖೆ ಈಚೆಗೆ ಸಿದ್ಧಪಡಿಸಿದ ಒಂದು ವರದಿಯಲ್ಲಿ ಒಟ್ಟು ಸರಬರಾಜು ಮತ್ತು ಬೇಡಿಕೆ ನಡುವಣ ಅಂತರ ನಿವಾರಣೆಯಾಗುವವರೆಗೆ ಹಣದುಬ್ಬರ ನಿರೋಧಕ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಾದುದು ಅಗತ್ಯವೆಂದು ತಿಳಿಸಿದೆ.
ಮಂಗಳೂರು, ಏ. 28 – ಕಾಸರಗೋಡು ತಾಲ್ಲೂಕಿನ ಕನ್ನಡ ಶಾಲೆಗಳನ್ನು ಮುಚ್ಚಲು ಕೇರಳ ಸರ್ಕಾರ ಯಾವ ಆಜ್ಞೆಯನ್ನೂ ಹೊರಡಿಸಿಲ್ಲವೆಂದು ಕೇರಳ ವಿಧಾನಸಭೆಯ ಮಂಜೇಶ್ವರ ಕ್ಷೇತ್ರದ ಸದಸ್ಯ ಎಂ.ರಾಮಪ್ಪ ಅವರು ಇಂದು ಇಲ್ಲಿ ತಿಳಿಸಿದರು.
ಈ ಬಗ್ಗೆ ಕರ್ನಾಟಕದ ವಿಧಾನ ಮಂಡಲದಲ್ಲಿ ವ್ಯಕ್ತಪಡಿಸಲಾದ ಕಳವಳ ಮತ್ತು ಪತ್ರಿಕಾ ವರದಿಗಳನ್ನು ಕೇರಳದ ಮುಖ್ಯಮಂತ್ರಿ ಅಚ್ಯುತಮೆನನ್ ಅವರ ಗಮನಕ್ಕೆ ತಂದಾಗ ಅವರು ವರದಿಗಳನ್ನು ನಿರಾಕರಿಸಿದರೆಂದು ರಾಮಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಕಾಸರಗೋಡು ತಲ್ಲೂಕಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಕಳೆದ ವರ್ಷ ಕನ್ನಡ ಮಾಧ್ಯಮದ ಐದು ಪ್ರೌಢ ಶಾಲೆಗಳು ಮತ್ತು ಎರಡು ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ’ ಎಂದು ಅಚ್ಯುತಮೆನನ್ ಅವರು ಹೇಳಿದರೆಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.