ಬೆಂಗಳೂರು, ಮಾರ್ಚ್ 10– ರಾಜ್ಯದಲ್ಲಿನ ವಿಧಾನಮಂಡಲ ನಾಯಕತ್ವದಲ್ಲಿ ಬದಲಾವಣೆಯೇನೂ ಇಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ದೇವಕಾಂತ ಬರೂವ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಆ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ತಾವು ಓದಿಲ್ಲವೆಂದು ಹೇಳಿ, ಮೊದಲು ಆ ಸಂಬಂಧದಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದರು.
ಪ್ರಶ್ನೆ: ಯಾರಾದರೂ ಆ ಬಗ್ಗೆ ಈ ಹಿಂದೆ ಚರ್ಚಿಸಿದರೇ?
ಉತ್ತರ: ನನಗೆ ನೆನಪಿಲ್ಲ.
ದೇವರಾಜ ಅರಸು ಮಂತ್ರಿಮಂಡಲದ ಬಗ್ಗೆ ತಮಗೇನೂ ಖಚಿತವಾದ ಆಪಾದನೆಗಳು ಬಂದಿಲ್ಲವೆಂದು ಬರೂವ ಅವರು ಹೇಳಿದರು.
ವಿವಿಧ ರಾಜ್ಯಗಳಿಂದ ಬರುವ ದೂರುಗಳನ್ನು ಪರಿಶೀಲಿಸಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಂದು ಪರಿಶೀಲನಾ ಸಮಿತಿಯನ್ನು ಹೊಂದಿದೆ. ಅದರಲ್ಲಿ ಹಿರಿಯ ಕಾಂಗ್ರೆಸ್ಸಿಗರಾದ ಸರ್ದಾರ್ ಸ್ವರ್ಣಸಿಂಗ್, ಸಿ. ಸುಬ್ರಹ್ಮಣ್ಯಂ ಮತ್ತು ಗೋಖಲೆ ಅವರು ಸದಸ್ಯರಾಗಿದ್ದಾರೆ. ಖಚಿತವಾದ ಆಪಾದನೆಗಳಿಂದ ಕೂಡಿದ ದೂರುಗಳನ್ನು ಆ ಸಮಿತಿಗೆ ಈಗಾಗಲೇ ಒಪ್ಪಿಸಲಾಗಿದೆಯೆಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.