ಬೆಂಗಳೂರು, ಏ. 8– ಭಾರತದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಪಡೆದಿರುವ ಕರ್ನಾಟಕ, ರಾಷ್ಟ್ರದಲ್ಲೇ ಪ್ರಥಮ ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಇಂದು ಪ್ರಥಮ ಹೆಜ್ಜೆಯನ್ನಿಟ್ಟಿತು.
ಆರೋಗ್ಯ ಸಚಿವ ಎಚ್. ಸಿದ್ಧವೀರಪ್ಪ ಅವರು ಮಂಡಿಸಿದ್ದ ವೈದ್ಯಕೀಯ ವಿಶ್ವವಿದ್ಯಾಲಯ ಮಸೂದೆಯ ಬಗ್ಗೆ ಜಂಟಿ ಪರಿಶೀಲಕ ಸಮಿತಿಯು ಸಲ್ಲಿಸಿದ್ದ ವರದಿಯ ಮೇಲೆ ಹಲವಾರು ತಿದ್ದುಪಡಿ ಮಂಡಿಸಿದ್ದನ್ನು ಸರ್ವಾನುಮತದಿಂದ ಇಂದು ಒಪ್ಪಿದ ವಿಧಾನಸಭೆ, ವಿರೋಧವಿಲ್ಲದೆ ಅನುಮೋದನೆ ನೀಡಿತು.
ದೂಳು ತಿನ್ನುತ್ತಿರುವ ಪುಸ್ತಕಗಳು
ಬೆಂಗಳೂರು, ಏ. 8– ಅರವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಲಲಿತಕಲಾ ಅಕಾಡೆಮಿ ಪ್ರಕಟಿಸಿರುವ ಚಿತ್ರಗಳ ಸಂಕಲನವೊಂದು ಕೊಳ್ಳುವವರೇ ಇಲ್ಲದೆ, ಅದರ ಪ್ರತಿಗಳೆಲ್ಲಾ ದೂಳು ತಿನ್ನುತ್ತಿವೆ.
‘ದೇವಾಲಯ ಶಿಲ್ಪಗಳು’ ಎನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಈ ಪುಸ್ತಕದಲ್ಲಿರುವ ಚಿತ್ರಗಳು, ವಿಗ್ರಹಗಳ ಛಾಯಾಚಿತ್ರದ ಆಧಾರದ ಮೇಲೆ ಬರೆದಿರುವ ರೇಖಾಚಿತ್ರಗಳು.
ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಅಕಾಡೆಮಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಸಲಹೆ ನೀಡಲು ನೇಮಕವಾಗಿದ್ದ ಖೋಸ್ಲಾ ಸಮಿತಿಯು ತನ್ನ ವರದಿಯಲ್ಲಿ (1972) ಈ ಪುಸ್ತಕದ ಕುರಿತು ಹೀಗೆ ಹೇಳಿದೆ:
‘ಈ ಚಿತ್ರಗಳು ಈಗಾಗಲೇ ಪ್ರಕಟವಾಗಿರುವ ದೇವಾಲಯದ ವಿಗ್ರಹಗಳ ಛಾಯಾಚಿತ್ರದ ಪ್ರತಿಕೃತಿಗಳು. ಇವು ಅಸಮರ್ಪಕ ಮತ್ತು ಚಿತ್ರಗಳು ನೋಡಲು ಹಿತವಾಗಿಲ್ಲ... ಆದರೂ ಐವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಇದರ ಮುದ್ರಣಕ್ಕಾಗಿ ವೆಚ್ಚ ಮಾಡಲಾಗಿದೆ. ಈ ಹಣ ದುರದೃಷ್ಟವಶಾತ್ ಲಲಿತಕಲಾ ಅಕಾಡೆಮಿಯದ್ದು’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.