ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಗುರುವಾರ, 14–1–1971

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 19:31 IST
Last Updated 13 ಜನವರಿ 2021, 19:31 IST
   

ಸಂಸ್ಥಾ ಕಾಂಗ್ರೆಸ್‌ ಭವನ ಆಕ್ರಮಿಸಲು ಪ್ರಯತ್ನ: 30 ಮಂದಿ ಬಂಧನ

ಬೆಂಗಳೂರು, ಜ. 13– ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಸಂಸ್ಥಾ ಕಾಂಗ್ರೆಸ್‌ ಭವನವನ್ನು ಇಂದು ಬೆಳಿಗ್ಗೆ ಅಕ್ರಮವಾಗಿ ಪ್ರವೇಶಿಸಿದರೆಂಬ ಆಪಾದನೆ ಮೇಲೆ ರಾಜ್ಯ ವಿಧಾನಸಭೆಯ ಆಡಳಿತ ಕಾಂಗ್ರೆಸ್ಸಿನ ಮುಖ್ಯ ಸಚೇತಕ ಶ್ರೀ ಎನ್‌. ಹುಚ್ಚ ಮಾಸ್ತಿಗೌಡ ಮತ್ತು ನಗರ ಕಾರ್ಪೊರೇಷನ್ನಿಗೆ ಆಯ್ಕೆ ಆಗಿರುವ ಆಡಳಿತ ಕಾಂಗ್ರೆಸ್ಸಿನ 7 ಮಂದಿ ಕಾರ್ಪೊರೇಟರುಗಳನ್ನು ಸೇರಿಸಿ, ಒಟ್ಟು 30 ಮಂದಿಯನ್ನು ಪೊಲೀಸರು ಬಂಧಿಸಿದರು.

ಬೆಳಿಗ್ಗೆ ಹುಚ್ಚ ಮಾಸ್ತಿಗೌಡ ನಾಯಕತ್ವದಲ್ಲಿ ಕಾಂಗ್ರೆಸ್‌ ಭವನ ಪ್ರವೇಶಿಸಿದರೆಂದೂ ಅಲ್ಲಿ ಬೀಗಹಾಕಿದ್ದ ಪರಿಣಾಮವಾಗಿ ಅವರೆಲ್ಲರೂ ಭವನದ ಕೆಳ ಮನೆಯನ್ನು ಆಕ್ರಮಿಸಿದರೆಂದೂ ತಿಳಿದುಬಂದಿದೆ.

ADVERTISEMENT

ಕೃತಕ ರೇಷ್ಮೆ ಬೆಲೆ ಏರಿಕೆ: 3 ಲಕ್ಷ ಮಂದಿಗೆ ನಿರುದ್ಯೋಗ ಭೀತಿ

ಬೆಂಗಳೂರು, ಜ. 13– ಕೃತಕ ರೇಷ್ಮೆ ನೂಲಿನ ಬೆಲೆ ಸಿಕ್ಕಾಪಟ್ಟೆ ಏರಿದ ಫಲವಾಗಿ, ರಾಜ್ಯದಲ್ಲಿರುವ ಸುಮಾರು 50 ಸಾವಿರ ಪವರ್‌ ಲೂಂಗಳು ಮುಚ್ಚುವ ‍ಪರಿಸ್ಥಿತಿ ಬಂದಿದ್ದು, ಅವನ್ನು ಅವಲಂಬಿಸಿದ್ದ ಮೂರು ಲಕ್ಷ ಮಂದಿ ಜೀವನೋಪಾಯಕ್ಕೆ ಪರಿತಪಿಸುವ ಭೀತಿ ತಲೆದೋರಿದೆ.

ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲು ಜ. 15ರಿಂದ ಎಲ್ಲ ಮಗ್ಗಗಳೂ ಮೂರು ದಿನ ಕೆಲಸ ನಿಲ್ಲಿಸಲು, ಬೃಹತ್‌ ಮೆರವಣಿಗೆ ನಡೆಸಲು, ಜವಳಿ ಮತ್ತು ರೇಷ್ಮೆ ಬಟ್ಟೆ ಮಾಲೀಕರಿಂದ ಹರತಾಳ ಆಚರಿಸಲು ನಿರ್ಧರಿಸಲಾಗಿದೆ ಎಂದು ಮೈಸೂರು ಪವರ್‌ ಲೂಂ ರೇಷ್ಮೆ ತಯಾರಕರ ಸಹಕಾರ ಸಂಘದ ಅಧ್ಯಕ್ಷ ಶ್ರೀ ಸಿ. ಚಿಕ್ಕವೆಂಕಟಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.