ADVERTISEMENT

ನಲವತ್ತೆಂಟು ಗಂಟೆಗಳಲ್ಲಿ ಎರಡು ಬಾರಿ ಭೂಕಂಪ: ಹತ್ತು ಸಾವಿರ ಸಾವು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:30 IST
Last Updated 1 ಸೆಪ್ಟೆಂಬರ್ 2018, 19:30 IST
Chinikuruli
Chinikuruli   

ನಲವತ್ತೆಂಟು ಗಂಟೆಗಳಲ್ಲಿ ಎರಡು ಬಾರಿ ಭೂಕಂಪ: ಹತ್ತು ಸಾವಿರ ಸಾವು

ಟೆಹರಾನ್, ಸೆ. 1– ಶನಿವಾರ ಪೂರ್ವ ಇರಾನಿನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಹಸ್ರಾರು ದೇಹಗಳನ್ನು ಎಣಿಸುತ್ತಿದ್ದಂತೆಯೇ ಉತ್ತರ ಇರಾನ್‌ ಇಂದು ಮತ್ತೆ ಭೂಕಂಪದಿಂದ ತಲ್ಲಣಗೊಂಡಿತು.

ಈಶಾನ್ಯ ಇರಾನ್‌ ಪ್ರದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಸಿಕ್ಕಿ ಸತ್ತವರ ಸಂಖ್ಯೆ 8000 ದಿಂದ 10,000 ಎಂದು ಇರಾನಿನ ಅಧಿಕಾರಿ ಇಂದು ಹೇಳಿದರು. ಸತ್ತವರಲ್ಲಿ ಬಹುಪಾಲು ಗ್ರಾಮಸ್ಥರು, ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದವರು.

ADVERTISEMENT

ತುಂಬಾ ನೆಲೆಯಿಂದ ರೋಹಿಣಿ ರಾಕೆಟ್‌ ಪ್ರಯೋಗ

ತಿರುವನಂತಪುರ, ಸೆ. 1– ಭಾರತದಲ್ಲೇ ಪ್ರಥಮವಾಗಿ ನಿರ್ಮಿಸಿದ 2 ಹಂತಗಳ ‘ರೋಹಿಣಿ’ ರಾಕೆಟ್‌ನ್ನು ನಿನ್ನೆ ರಾತ್ರಿ ಇಲ್ಲಿಗೆ ಸಮೀಪದಲ್ಲಿರುವ ತುಂಬಾ ರಾಕೆಟ್‌ ನೆಲೆಯಿಂದ ಯಶಸ್ವಿಯಾಗಿ ಪ್ರಯೋಗಿಸಲಾಯಿತು.

ಕೇಂದ್ರ ಸಚಿವಾಲಯದಲ್ಲೂ ಹರಿಜನರಿಗೆ ಪ್ರತ್ಯೇಕ ನೀರಿನ ಮಡಿಕೆ

ನವದೆಹಲಿ, ಸೆ.1– ನಿಮ್ನಜಾತಿ ಮತ್ತು ಬುಡಕಟ್ಟುಗಳವರು ಸಮಾಜದಲ್ಲಿ ಗೌರವ ಸ್ಥಾನ ಪಡೆದುಕೊಳ್ಳಲು ಹೋರಾಟ ಮಾಡುವಂತೆ ಕೆಂದ್ರ ಆಹಾರ ಮತ್ತು ಕೃಷಿ ಸಚಿವ ಶ್ರೀ ಜಗಜೀ
ವನರಾಂ ಅವರು ಕರೆನೀಡಿ ‘ಮಾಡಬೇಕು ಇಲ್ಲವೇ ಮಡಿಯಬೇಕು’ ಎಂದು ಉಪದೇಶಿಸಿದರು.

ಅಖಿಲಭಾರತ ನಿಮ್ನಜಾತಿ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಶಾಸಕರು ಮತ್ತು ಕಾರ್ಯಕರ್ತರ ಸಮ್ಮೇಳನವನ್ನು ಶ್ರೀ ಜಗಜೀವನರಾಂ ಅವರು ನಿನ್ನೆ ಉದ್ಘಾಟಿಸಿದಾಗ ಕಟುವಾಗಿ ಮಾತನಾಡಿ ‘ಹೋರಾ
ಡಲು, ಹೋರಾಡಲು, ಹೋರಾಡಲು ನಿಮ್ಮನ್ನು ಕರೆಯುತ್ತಿದ್ದೇನೆ’ ಎಂದು ಆವೇಶತುಂಬಿದ ಧ್ವನಿಯಲ್ಲಿ ನುಡಿದರು. ‘ಅಸ್ಪೃಶ್ಯತೆ ಗ್ರಾಮಗಳಲ್ಲಿ ಮಾತ್ರ ಇದೆ ಎಂಬುದು ನಿಜವಲ್ಲ; ದೆಹಲಿಯಲ್ಲೂ ಇದೆ. ಕೇಂದ್ರ ಸಚಿವಾಲಯದಲ್ಲೇ ಹರಿಜನರಿಗಾಗಿ ಪ್ರತ್ಯೇಕ ನೀರು ಮಡಿಕೆಗಳಿವೆ. ಆ ಮಡಿಕೆಗಳನ್ನು ಒಡೆದುಹಾಕಿ. ನಿಮ್ಮ ಬಳಕೆಗೆ ನಿಷೇಧಿಸಿರುವ ಬಾವಿಗಳಿಗೆ ನುಗ್ಗಿ. ಯಾರಾದರೂ ನಿಮ್ಮನ್ನು ಅಸ್ಪೃಶ್ಯರಂತೆ ಕಂಡರೆ ನೀವೂ ಅವರನ್ನು ಅಸ್ಪೃಶ್ಯರಂತೆ ಕಾಣಿರಿ ಎಂದು ಸಚಿವರು ಹೇಳಿದಾಗ ಸಭಿಕರು ಭಾರಿ ಕರತಾಡನ ಮಾಡಿದರು.

ರಾಜ್ಯ ಸಭೆ, ವಿಧಾನ ಮಂಡಲಕ್ಕೆ ನಾಮಕರಣ ಮಾಡುವ ವ್ಯವಸ್ಥೆಗೆ ಸ್ವತಂತ್ರ ಪಕ್ಷದ ವಿರೋಧ

ನವದೆಹಲಿ, ಸೆ. 1 – ರಾಜ್ಯ ಸಭೆ ಮತ್ತು ವಿಧಾನ ಸಭೆಗಳಿಗೆ ಸದಸ್ಯರನ್ನು ನಾಮಕರಣ ಮಾಡುವ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗಿರುವ ಅಧಿಕಾರವನ್ನು ರದ್ದುಪಡಿಸುವ ಬಗ್ಗೆ ಸಂವಿಧಾ
ನಕ್ಕೆ ತಿದ್ದುಪಡಿ ಸೂಚಿಸುವ ಮಸೂದೆಯೊಂದನ್ನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸ್ವತಂತ್ರ ಪಕ್ಷ ನಿರ್ಧರಿಸಿದೆ.

‘ರಾಜಕಾರಣಿಗೇ ರಾಷ್ಟ್ರದ ಭವಿಷ್ಯವನ್ನು ಬಿಡುವುದು ಲೇಸಲ್ಲ’

ನವದೆಹಲಿ, ಸೆ. 1 – ಜನತೆಗೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವನ್ನು ದೊರಕಿಸಿಕೊಡಲು ಕಂಕಣಬದ್ಧರಾಗುವ ಬುದ್ಧಿ ಜೀವಿಗಳು ರಾಷ್ಟ್ರದ ಭವಿಷ್ಯವನ್ನು ರಾಜಕಾರಣಿಗಳಿಗೇ ಬಿಡಬಾರದೆಂದು ಭಾರತದ ಮಾಜಿ ಶ್ರೇಷ್ಠ ನ್ಯಾಯಾಧೀಶ ಡಾ. ಸಿ. ಬಿ. ಗಜೇಂದ್ರಗಡ್ಕರ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.