ADVERTISEMENT

ಗುರುವಾರ, 18–1–1968

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST

ರಣ್ ಪ್ರದೇಶದ ಹೆಚ್ಚು ಭಾಗ ಪಾಕಿಸ್ತಾನಕ್ಕೆ?

(ನಮ್ಮ ಪ್ರತಿನಿಧಿಯಿಂದ)

ನವದೆಹಲಿ ಜ. 17– ಕಛ್‌ನ ರಣ್ ಪ್ರದೇಶ ಕುರಿತ ತ್ರಿಸದಸ್ಯ ನ್ಯಾಯಮಂಡಲಿ ತೀರ್ಪು ಭಾರತಕ್ಕೆ ವಿರುದ್ಧವಾಗಿರಬಹುದೆಂಬ ಕಳವಳಕಾರಕ ಸುದ್ದಿ ಜಿನೀವಾದಿಂದ ಬಂದಿದೆ.

ADVERTISEMENT

ಇದರಿಂದ ಈಗ ಭಾರತದ ಸ್ವಾಧೀನದಲ್ಲಿರುವ ಬಹುತೇಕ ಭಾಗವನ್ನು ತೆರವು ಮಾಡಬೇಕಾಗಬಹುದು.

ಯು.ಪಿ. ಬಿಕ್ಕಟ್ಟು; ಸಭೆ ವಿಫಲ

ಲಖನೌ, ಜ. 17– ಉತ್ತರ ‍ಪ್ರದೇಶದಲ್ಲಿ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೇ ಬೆದರಿಕೆಯನ್ನು ಉಂಟು ಮಾಡಿರುವ ಬಿಕ್ಕಟ್ಟನ್ನು ಪರಿಹರಿಸಲು ಇಂದು ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಸಭೆ ಸೇರಿದ್ದ ಅಧಿಕಾರಾರೂಢ ಸಂಯುಕ್ತ ವಿಧಾಯಕ ದಳದ ಸಮನ್ವಯ ಸಮಿತಿಯು ವಿಫಲವಾಯಿತು.

ಹೊಸ ನಾಯಕನ ಆಯ್ಕೆಯನ್ನು ಕುರಿತ ಪ್ರಶ್ನೆಯ ಬಗ್ಗೆ ಸಮಿತಿಯಲ್ಲಿ ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಎಸ್ಸೆನ್ ಯತ್ನ: ಇಂದು ಪಟ್ಟಿಯ ಪ್ರಕಟಣೆ

ನವದೆಹಲಿ, ಜ. 17– ಕಾಂಗ್ರೆಸ್ ಕಾರ್ಯಸಮಿತಿಯ ಹದಿಮೂರು ನಾಮಕರಣ ಸ್ಥಾನಗಳ ಸದಸ್ಯರ ಪಟ್ಟಿಯನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಪ್ರಕಟಿಸಲಿಲ್ಲ.

ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಾ ನಾಳೆ ಸಂಜೆ ಆರು ಗಂಟೆಗೆ ಪಟ್ಟಿಯನ್ನು ಖಂಡಿತವಾಗಿ ಪ್ರಕಟಿಸುವುದಾಗಿ ತಿಳಿಸಿದರು. ನಿನ್ನೆ ಸುದ್ದಿ ಪ್ರಕಾರ ಇಂದು ಪಟ್ಟಿ ಪ್ರಕಟವಾಗಬೇಕಿತ್ತು.

ಅಲ್ಲದೆ ಸಮಿತಿಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ತಾವು ಯತ್ನಿಸುವುದಾಗಿ ಅವರು ಹೇಳಿದರು.

ಒಂದೇ ಏಟಿಗೆ ರಷ್ಯದೆಲ್ಲ ನಗರಗಳ ನಾಶಮಾಡಬಲ್ಲ ಬಹು ಸಿಡಿತಲೆ ಕ್ಷಿಪಣಿ

ವಾಷಿಂಗ್‌ಟನ್, ಜ. 17– ಒಂದೇ ಏಟಿಗೆ 6 ಕೋಟಿ ರಷ್ಯನ್ ನಗರವಾಸಿಗಳನ್ನೂ ನಾಶಮಾಡಬಲ್ಲ ‘ಹಲವು ಸಿಡಿತಲೆಗಳ ಕ್ಷಿ‍ಪಣಿ’ಯು ಅಮೆರಿಕದ ಅಣ್ವಸ್ತ್ರ ಯೋಜನೆಯಲ್ಲಿ ಅತ್ಯಂತ ಹೊಸ ಅಸ್ತ್ರ ಎಂದು ಅಣುಬಾಂಬ್ ಪ್ರವರ್ತಕ ವಿಜ್ಞಾನಿಗಳಲ್ಲೊಬ್ಬರಾದ ಡಾ. ರಾಲ್ಫ್‌ಲ್ಯಾಪ್ ತಿಳಿಸಿದ್ದಾರೆ.

ಈ ವಿಧಾನವನ್ನು ಅವರು ‘ಆರು ಗುಂಡಿನ ಪಿಸ್ತೂಲಿ’ಗೆ ಹೋಲಿಸಿ, ಅಣುಯುದ್ಧ ಆರಂಭಿಸಿದರೆ, ಪ್ರತಿಪೆಟ್ಟು ಎಷ್ಟು ಘೋರವಾಗಿರುತ್ತದೆಂಬುದನ್ನು ಚಿತ್ರಿಸಿದರು.

ಅಂಥ ವಿನಾಶಕಾರಿ ಆಕ್ರಮಣಕ್ಕೆ 45 ಖಂಡಾಂತರ ಕ್ಷಿಪಣಿಗಳೇ ಸಾಕು; ಏಕೆಂದರೆ ಪ್ರತಿಯೊಂದರಲ್ಲೂ ಹಲವು ಅಣುಬಾಂಬ್‌ ಸಿಡಿತಲೆಗಳನ್ನು ಸೇರಿಸಬಹುದು ಎಂದು ಅವರು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.