ADVERTISEMENT

ಮಂಗಳವಾರ, 30–1–1968

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

ಮೈಸೂರು ನಗರದಲ್ಲಿ ಉದ್ರಿಕ್ತ ಗುಂಪಿನ ಮೇಲೆ ಗೋಲಿಬಾರ್

ಮೈಸೂರು, ಜ. 29– ಹಿಂಸಾಕೃತ್ಯಗಳಲ್ಲಿ ತೊಡಗಿದ ಹಿಂದಿ ವಿರೋಧಿ ವಿದ್ಯಾರ್ಥಿ ಪ್ರದರ್ಶನಕಾರರನ್ನು ಚದುರಿಸಲು ಇಂದು ಮಧ್ಯಾಹ್ನ ಇಲ್ಲಿ ಪೊಲೀಸರು 12 ಸುತ್ತು ಗುಂಡು ಹಾರಿಸಿದ ಕಾರಣ ಒಬ್ಬ ಸತ್ತು ಎಂಟು ಮಂದಿ ಗಾಯಗೊಂಡರು.

ನೂರಡಿ ರಸ್ತೆಯಲ್ಲಿ ಪೊಲೀಸರು ಒಟ್ಟು 12 ರೌಂಡ್ ಗುಂಡು ಹಾರಿಸಿದರು. ಮಧ್ಯಾಹ್ನ 12.15 ಗಂಟೆಗೆ ಸೀತಾ ವಿಲಾಸ ಛತ್ರದ ಬಳಿ ವಿದ್ಯಾರಣ್ಯಪುರದ ಬಡಗಿ ಶ್ರೀ ಪುಟ್ಟಯ್ಯ (20 ವರ್ಷ) ಎಂಬ ಯುವಕನು ಗುಂಡೇಟಿನಿಂದ ಮೃತಪಟ್ಟನು. ಗೋಲಿಬಾರ್‌ನಿಂದ 5 ಜನ ಮತ್ತು ಅಶ್ರುವಾಯು ಪ್ರಯೋಗದಿಂದ ಇಬ್ಬರು ಗಾಯಗೊಂಡರು.

ADVERTISEMENT

69ರಿಂದ 10 ವರ್ಷಗಳ ಹೊಸ ಎಸ್ಸೆಸ್ಸೆಲ್ಸಿ ಶಿಕ್ಷಣ:

71 ರಿಂದ ನೂತನ ಪಿ.ಯು.ಸಿ.

ಬೆಂಗಳೂರು, ಜ. 29– ಐಚ್ಛಿಕ ವಿಷಯಗಳಿಲ್ಲದ, ಹತ್ತು ವರ್ಷಗಳ ನೂತನ ಎಸ್ಸೆಸ್ಸೆಲ್ಸಿ ಶಿಕ್ಷಣ ಕ್ರಮವು 1969ರಿಂದ ಮೈಸೂರು ರಾಜ್ಯದಲ್ಲಿ ಜಾರಿಗೆ ಬರುವುದು.

ಎರಡು ವರ್ಷಗಳ ಪಿ.ಯು.ಸಿ. ಪಠ್ಯಕ್ರಮವನ್ನು 1971ರಿಂದ ಆಚರಣೆಗೆ ತರಲಾಗುವುದು. ಈಗ ಒಂದು ವರ್ಷದ ಪಿ.ಯು.ಸಿ. ಶಿಕ್ಷಣ ಕ್ರಮವಿದೆ.

ಇಂದು ನಗರದಲ್ಲಿ ಸಮಾವೇಶಗೊಂಡ ರಾಜ್ಯ ಶಿಕ್ಷಣ ಸಲಹಾ ಮಂಡಳಿಯು ಈ ಎರಡು ವಿಷಯಗಳನ್ನು ಚರ್ಚಿಸಿ, ಒಪ್ಪಿಕೊಂಡು, ಅನುಷ್ಠಾನಕ್ಕೆ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಕಾರ್ಯಸಮಿತಿ ನಿರ್ಣಯ–ಕೇಂದ್ರ ಆಡಳಿತಕ್ಕೆ ಹಿಂದಿ, ಇಂಗ್ಲಿಷ್; ಶಾಲೆಗಳಲ್ಲಿ ತ್ರಿಭಾಷೆ

ನವದೆಹಲಿ, ಜ. 29– ಕಾಂಗ್ರೆಸ್ ಕಾರ್ಯ ಸಮಿತಿ ಇಂದು ಬೆಳಿಗ್ಗೆ ಎರಡು ಗಂಟೆಗಳ ಕಾಲ ಕಾರ್ಯಕಲಾಪಗಳನ್ನು ನಡೆಸಿದ ನಂತರ ನಿರ್ಣಯವೊಂದನ್ನು ಅಂಗೀಕರಿಸಿ ತ್ರಿಭಾಷಾ ಸೂತ್ರದ ಬಗ್ಗೆ ತನ್ನ ಒಲವನ್ನು ಪುನರುಚ್ಚರಿಸಿತು. ಆದರೆ ಸದ್ಯದ ಭಾಷಾ ಬಿಕ್ಕಟ್ಟು ಪರಿಹಾರಕ್ಕೆ ಈ ನಿರ್ಣಯದಲ್ಲಿ ಯಾವ ನಿರ್ದಿಷ್ಟ ಸೂತ್ರವೂ ಇಲ್ಲ.

ಕೇಂದ್ರ ಸರ್ಕಾರದ ಆಡಳಿತದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಬಳಸಬೇಕೆಂಬ ದ್ವಿಭಾಷಾ ಸೂತ್ರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇಂದು ಮತ್ತೆ ಪ್ರತಿಪಾದಿಸಿತು.

ಆದರೆ ಈ ದ್ವಿಭಾಷಾ ಸೂತ್ರವನ್ನು ಜಾರಿಗೆ ತರುವಾಗ ‘ಯಾವುದೇ ಇಂದು ಪ್ರದೇಶದ ಜನರ ಮೇಲೆ ಹೆಚ್ಚಿನ ಹೊರೆ ಬೀಳದಂತೆ’ ಎಚ್ಚರಿಕೆ ವಹಿಸಬೇಕೆಂದೂ ಕಾರ್ಯಕಾರಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಕರೆ ನೀಡಿತು.

ಮೆಡಿಕಲ್ ಕಾಲೇಜು ಮುಷ್ಕರ ರದ್ದು: ಡಾ. ಗೋಕಾಕ್ ಯತ್ನ ಸಫಲ

ಬೆಂಗಳೂರು, ಜ. 29– ವಿದ್ಯಾರ್ಥಿಗಳ ಸಮಸ್ಯೆ ವಿಶ್ವವಿದ್ಯಾನಿಲಯದ ಜವಾಬ್ದಾರಿಯಾದ್ದರಿಂದ ಬೇಡಿಕೆಗಳ ವಿಚಾರವನ್ನು ವಿಶ್ವವಿದ್ಯಾನಿಲಯಕ್ಕೆ ಬಿಟ್ಟು ಕಾಲೇಜುಗಳಿಗೆ ತೆರಳಬೇಕೆಂದು ಉಪಕುಲಪತಿ ಡಾ. ವಿ.ಕೃ. ಗೋಕಾಕ್ ಅವರು ಕರೆ ನೀಡಿದ ನಂತರ ಬೆಂಗಳೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಇಂದು ತಮ್ಮ ಪ್ರತಿಭಟನಾ ಮೆರವಣಿಗೆ ಹಾಗೂ ಮುಷ್ಕರಗಳನ್ನು ರದ್ದುಗೊಳಿಸಿದರು.

ಫರ್ನಾಂಡಿಸ್ ಆಯ್ಕೆ ಕ್ರಮಬದ್ಧ: ಕೋರ್ಟ್ ವೆಚ್ಚ ಕೊಡಲು ಪಾಟೀಲ್‌ಗೆ ಆಜ್ಞೆ

ಮುಂಬೈ, ಜ. 29– ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದಿಂದ ಶ್ರೀ ಜಾರ್ಜ್ ಫರ್ನಾಂಡಿಸ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮತದಾರ ಶ್ರೀ ಎನ್.ಬಿ. ಸಾಮಂತ್ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು  ಇಂದು ಮುಂಬೈ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಶ್ರೀ ಕಂಟವಾಲಾ ಅವರು ವಜಾ ಮಾಡಿದರು.

ಈ ಮೊಕದ್ದಮೆಯಲ್ಲಿ ಶ್ರೀ ಎಸ್.ಕೆ. ಪಾಟೀಲರು ದ್ವಿತೀಯ ಪ್ರತಿವಾದಿಯಾಗಿದ್ದರು.

ಶ್ರೀ ಫರ್ನಾಂಡಿಸ್ ಅವರಿಗೆ ದಿನಕ್ಕೆ 400 ರೂ.ಗಳಂತೆ ಕೋರ್ಟ್ ವೆಚ್ಚವನ್ನು ಕೊಡಬೇಕೆಂದು ಶ್ರೀ ಪಾಟೀಲರಿಗೆ ಕೋರ್ಟು ಆಜ್ಞೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.