ADVERTISEMENT

ಶನಿವಾರ, 3–2–1968

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST

ಭಾಷಾ ಸಮಸ್ಯೆ ಬಿಡಿಸಲು ಮುಖ್ಯಮಂತ್ರಿಗಳ ಸಭೆ

ಬೆಂಗಳೂರು, ಫೆ. 2– ಭಾಷೆಯ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಈಚೆಗೆ ಕೇಂದ್ರ ಸರಕಾರಕ್ಕೆ ನೀಡಿದ ಆದೇಶವನ್ನು ಕಾರ್ಯಗತ ಮಾಡುವ ಸಂಬಂಧದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಡನೆ ತಾವು ಚರ್ಚೆ ನಡೆಸಲಿರುವುದಾಗಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ತಿಳಿಸಿದರು.

‘ಕನ್ನಡ ಕುಲದ ಆಧಾರಸ್ತಂಭ’ ಡಾ. ಎ.ಆರ್. ಕೃಷ್ಣಶಾಸ್ತ್ರೀ ಅವರ ದೇಹಾವಸಾನ

ADVERTISEMENT

ಬೆಂಗಳೂರು, ಫೆ. 2– ಕನ್ನಡ ಸಾರಸ್ವತ ಲೋಕದ ಪ್ರಕಾಂಡ ಪಂಡಿತ ಡಾ. ಎ.ಆರ್. ಕೃಷ್ಣಶಾಸ್ತ್ರೀ ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಫೆಬ್ರುವರಿ ಹನ್ನೆರಡಕ್ಕೆ ಅವರಿಗೆ ಎಪ್ಪತ್ತೆಂಟು ತುಂಬಲಿತ್ತು.

ಎಂಟೂವರೆ ಹೊತ್ತಿಗೆ ಊಟ ಮಾಡಿ, ಹಾಲು ಕುಡಿದು ಮಲಗುವ ಕೊಠಡಿಗೆ ತೆರಳಿದ ಡಾ. ಶಾಸ್ತ್ರಿಯವರು 9–15ಕ್ಕೆ ಹಾಸಿಗೆಯ ಮೇಲಿನಿಂದ ಕೂಗಿಕೊಂಡರು. ಕೆಲವು ನಿಮಿಷಗಳಲ್ಲೇ ಕೊನೆ ಬಂತು. ಸಮೀಪದ ಮನೆಯ ವೈದ್ಯರೊಬ್ಬರು ಧಾವಿಸಿ ಬಂದು, ಇಂಜೆಕ್ಷನ್ ಕೊಟ್ಟರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಒಯ್ಯಲೆಂದು ತರಿಸಿದ ಆಂಬ್ಯುಲೆನ್ಸ್ ವಾಹನವನ್ನು ಹಿಂದಕ್ಕೆ ಕಳುಹಿಸಲಾಯಿತು.

ಶ್ರೀ ಶಾಸ್ತ್ರಿಗಳ ನೆನಪೇ ಪೂಜ್ಯ: ಕುವೆಂಪು

ಮೈಸೂರು, ಫೆ. 2– ‘ಶ್ರೀ ಕೃಷ್ಣಶಾಸ್ತ್ರಿಗಳ ನೆನಪೇ ಒಂದು ಪೂಜ್ಯ ವಸ್ತು. ಅವರು ಇಂದು ದೇಹ ಚಕ್ಷುವಿಗೆ ಆಗಮ್ಯವಾಗಿದ್ದಾರೆ. ಆದರೆ ಹೃದಯ ಚಕ್ಷುವಿಗೆ ಧ್ಯಾನ ಗಮ್ಯವಾಗಿದ್ದಾರೆ’ ಎಂದು ಡಾ. ಕೆ.ವಿ. ಪುಟ್ಟಪ್ಪನವರು ತಮ್ಮ ನೆಚ್ಚಿನ ಗುರುಗಳ ಸಾವಿನ ಸುದ್ದಿಯನ್ನು ಕೇಳಿದಾಗ ಭಕ್ತಿ ಮತ್ತು ಭಾವ ಪರವಶತೆಗಳಿಂದ ತಮ್ಮ ಗುರುಗಳನ್ನು ನೆನೆದರು.

‘ದಿವಂಗತ ವೆಂಕಣ್ಣಯ್ಯ ಮತ್ತು ಶ್ರೀ ಕೃಷ್ಣಶಾಸ್ತ್ರಿಗಳು ಕನ್ನಡ ನವೋದಯದ ಉಷಃಕಾಲಕ್ಕೆ ನಮಗೆ ಮೊದಲು ಕಾಣಿ
ಸಿಕೊಂಡ ಎರಡು ಬೆಳ್ಳಿಗಳು’ ಎಂದರು.

ಭವ್ಯ ಭಾರತ ನಿರ್ಮಾಣಕ್ಕೆ ವಿಜ್ಞಾನದ ಬಳಕೆ: ಪ್ರಧಾನಿ ಕನಸು

ತಿರುವನಂತಪುರ, ಫೆ. 2– ಬಡತನದಿಂದ ಬಿಡುಗಡೆ ಹೊಂದಿದ, ಜನಜೀವನದ ಒಳಿತಿಗಾಗಿ ಆಧುನಿಕ ವಿಜ್ಞಾನ ಮತ್ತು ತಾಂತ್ರಿಕತೆಯ ಪೂರ್ಣ ಪ್ರಯೋಜನ ಪಡೆದ ಸಮೃದ್ಧ ಭಾರತ. ಇದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಇಂದು ತುಂಬಾ ರಾಕೆಟ್ ನೆಲೆಯಲ್ಲಿ ಕಂಡ ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.