ADVERTISEMENT

20–2–1968

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST

ರಾಜ್ಯದ ಎರಡು ಹೊಸ ಮಾರ್ಗಗಳಲ್ಲಿ ಈ ವರ್ಷ ಭಾಗಶಃ ಸಂಚಾರ ಆರಂಭ
ನವದೆಹಲಿ, ಫೆ. 19:
ಬೆಂಗಳೂರು– ಸೇಲಂ ವಿಭಾಗದಲ್ಲಿನ ಧರ್ಮಪುರಿ– ಬೆಂಗಳೂರು ರೈಲು ಮಾರ್ಗ, ಹಾಸನ–ಮಂಗಳೂರು ವಿಭಾಗದಲ್ಲಿನ ಮಂಗಳೂರು-ಪನಾಂಬೂರ್‌ ರೈಲು ಮಾರ್ಗ ಮತ್ತು ಹಿಂದು ಮಲಕೋಟ್‌–ಶ್ರೀ ಗಂಗಾ ನಗರ ರೈಲು ಮಾರ್ಗಗಳನ್ನು ಬರುವ ಆರ್ಥಿಕ ವರ್ಷದಲ್ಲಿ ಸಂಚಾರಕ್ಕೆ ತೆರೆಯುವ ನಿರೀಕ್ಷೆ ಇದೆ ಎಂದು ರೈಲ್ವೆ ಸಚಿವ ಶ್ರೀ ಸಿ.ಎಂ. ಪೂಣಚ್ಚ ಅವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ರಣ್‌ನ ಬಹುಭಾಗ ಭಾರತಕ್ಕೆ
ಜಿನೀವ, ಫೆ. 19–
ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದ ಉದ್ಭವಿಸಿದ್ದ ಕಛ್‌ನ ರಣ್‌ ಪ್ರದೇಶದ ಶೇಕಡ 90 ಭಾಗ ಭಾರತೀಯ ನೆಲವೆಂದು ಅಂತರರಾಷ್ಟ್ರೀಯ ಪಂಚಾಯಿತಿ ಮಂಡಲಿಯೊಂದು ಇಂದು ಘೋಷಿಸಿ ಸುಮಾರು 300 ಚದುರ ಮೈಲಿ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದೆಂದು ಹೇಳಿತು.

ಕೃಷ್ಣಾ ವಿವಾದ; ರಾಜ್ಯದ ಹಿತರಕ್ಷಣೆಗೆ ಬೇರೆ ಕ್ರಮಗಳು
ಬೆಂಗಳೂರು, ಫೆ. 19–
ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ರಾಜ್ಯದ ಹಿತರಕ್ಷಣೆಗೆ ‘ನ್ಯಾಯಿಕ ಪರಿಹಾರವೂ ಸೇರಿ ಬೇರೆ ಕ್ರಮಗಳನ್ನು’ ರಾಜ್ಯ ಸರಕಾರ ಪರ್ಯಾಲೋಚಿಸುತ್ತಿದೆ.

ADVERTISEMENT

ಈ ವಿಷಯವನ್ನು ರಾಜ್ಯಪಾಲ ಶ್ರೀ ಜಿ.ಎಸ್‌. ಪಾಠಕ್‌ರವರು ಇಂದು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ತಿಳಿಸಿದರು.

‘ಗೂಂಡಾರಾಜ್ಯದ’ ವಿರುದ್ಧ ಪ್ರತಿಭಟಿಸಿ ವಿರೋಧಪಕ್ಷಗಳ ಸಭಾತ್ಯಾಗ
ಬೆಂಗಳೂರು, ಫೆ. 19–
‘ಪೊಲೀಸ್‌ ಗೂಂಡಾರಾಜ್ಯಕ್ಕೆಡೆಗೊಟ್ಟು ಕಾನೂನಿನ ಆಡಳಿತವೇ ಕುಸಿದುಬಿದ್ದರೂ ರಾಜ್ಯಪಾಲರು ಈ ಮಂತ್ರಿ ಮಂಡಳವನ್ನು ವಜಾ ಮಾಡದಿರುವುದಕ್ಕಾಗಿ ಸರ‍್ಕಾರದ ವಿರುದ್ಧ ಪ್ರತಿಭಟಿಸಿ ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿ’ ಇಂದು ನಡೆದ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಜನಸಂಘ ಹೊರತು ಉಳಿದ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ಸಚಿವ ಶ್ರೀ ರಾಮರಾವ್‌ ರಾಜೀನಾಮೆ
ಬೆಂಗಳೂರು, ಫೆ. 19–
ಗೃಹ ಮತ್ತು ಕಾರ್ಮಿಕ ಸಚಿವ ಶ್ರೀ ಎಂ.ವಿ. ರಾಮರಾವ್‌ ಅವರು ಸಚಿವ ಪದವಿಗೆ ನೀಡಿರುವ ರಾಜೀನಾಮೆಯನ್ನು ಮುಖ್ಯಮಂತ್ರಿಗಳ ಸಲಹೆ ಮೇರೆಗೆ ರಾಜ್ಯಪಾಲರು ಅಂಗೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.