75 ವರ್ಷಗಳ ಹಿಂದೆ ಈ ದಿನ
ರಂಗೂನ್, ಜೂನ್ 22– ಭಾರತದ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಈ ದಿನ ಬರ್ಮಾದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತ, ‘ನೀವುಗಳು ಭಾರತದ ರಾಯಭಾರಿಗಳಂತೆ ವರ್ತಿಸಿ, ಉಭಯ ದೇಶಗಳ ಸಾಮರಸ್ಯ ಹೆಚ್ಚುವಂತೆ ಮಾಡಬೇಕು’ ಎಂದು ಉಪದೇಶ ಮಾಡಿದರು.
ಅರ್ಧಕಾಲ ಹಿಂದಿಯಲ್ಲೂ, ಅರ್ಧಕಾಲ ಇಂಗ್ಲಿಷ್‌ನಲ್ಲೂ ಭಾಷಣ ಮಾಡಿದ ನೆಹರೂ, ಸ್ವಾತಂತ್ರ್ಯ ತನ್ನ ಜೊತೆಯಲ್ಲಿ ಹೊತ್ತು ತಂದಿರುವ ಜವಾಬ್ದಾರಿಗಳ ಅರಿವು ಮಾಡಿಕೊಳ್ಳಬೇಕೆಂದು ಜನತೆಗೆ ಒತ್ತು ಹೇಳುತ್ತ, ಹೊಸದಾಗಿ ಸ್ವಾತಂತ್ರ್ಯಗಳಿಸಿಕೊಂಡಿರುವ ರಾಷ್ಟ್ರಗಳಲ್ಲಿ ಸಂಪೂರ್ಣ ಐಕಮತ್ಯ ಅಗತ್ಯ ಎಂದರು.
ಅಖಿಲ ಬರ್ಮಾ ಕಾಂಗ್ರೆಸ್ಸಿನ ಆಶ್ರಯದಲ್ಲಿ ಸೇರಿದ್ದ ಈ ಸಭೆಗೆ ಬರ್ಮಾ ಪ್ರಧಾನಿ ಥಾಕಿನ್ ನೂ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಚಿವ ಯೂ ಟುನ್ ಪೆ, ನ್ಯಾಯಾಂಗ ಸಚಿವ ಯೂ ಖೀಂ ಮಾಂಗ್, ವಿಶೇಷ ಸೌಕರ್ಯ ಕಲ್ಪನಾ ಸಮಿತಿಯ ಅಧ್ಯಕ್ಷೆ ಆಂಗ್ ಸೇನ್, ಬರ್ಮಾದ ಭಾರತೀಯ ಮುಖಂಡರೂ ವೇದಿಕೆಯ ಮೇಲೆ ಇದ್ದರು.
ಮುಂಬೈ, ಜೂನ್ 22– ಬೋನಸ್ ಪ್ರಶ್ನೆಯನ್ನು ಕುರಿತ ಸಂಭಾಷಣೆ ಫಲಪ್ರದವಾಗದ್ದರಿಂದ ಮುಂಬೈ ಬಂದರು ಕಟ್ಟೆ ಕೆಲಸಗಾರರ ಸಂಘದ ಆರು ಸಹಸ್ರ ಮಂದಿ ಸದಸ್ಯರು ನಾಳೆಯಿಂದ ಅನಿಶ್ಚಿತಾವಧಿಯವರೆಗೆ ಮುಷ್ಕರ ಹೂಡಬೇಕೆಂದು ಈ ದಿನ ನಿರ್ಧರಿಸಿದರು.
ಅಧಿಕಾರೇತರ ರೀತಿಯಲ್ಲಿ ಮುಷ್ಕರದ ವಿಚಾರ ಗೊತ್ತಾದ್ದರಿಂದ ಶಸ್ತ್ರಸಜ್ಜಿತ ಪೊಲೀಸ್ ಪಡೆಗಳು, ನಾಲ್ಕು ಮೈಲಿ ಉದ್ದದ ಮುಂಬೈ ಜಲತಟದ ಮುಖ್ಯ ಸ್ಥಳಗಳಲ್ಲೂ ಬಂದರು ಕಟ್ಟೆಯ ಒಳಗೂ ಪಹರೆ ನಿಂತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.