
ಚುರುಮುರಿ: ನೋವಿನ ಹಾಡು..!
ಹಬ್ಬಿದಾ ಹೊಗೆ ಮಧ್ಯದೊಳಗೆ, ಅಧಿಕಾರಕ್ಕೆ ಹಾತೊರೆಯುತಿಹ ಕೈಪಾಳೆಯದಲಿ, ಟಗರು– ಬಂಡೆಯ ಪರಿಯನೆಂತು ಪೇಳ್ವೆನು ಎಂದು ಮೀಡಿಯಾಗಳು ಮೊರೆಯುತ್ತಿರುವಾಗ...
ಟಗರು ಬಾರೋ, ಬಂಡೆ ಬಾರೋ ಎಂದಾರೂ ಕರೆಯದೆ, ಅಧಿಕಾರಕ್ಕೆ ಮೊಂಡು ಹಿಡಿದು ಹೈಕಮಾಂಡ್ ಬಾಲ ಹಿಡಿದು ಇಂದ್ರಪ್ರಸ್ಥಕೆ(ದೆಹಲಿ) ಹೋದ ಪುಟ್ಟ ಬಂದ
ಬಂಡೆಯೆಂಬುದದು ಅಧಿಕಾರವುಂಡವರ ಪ್ರವರ ಹೇಳುತಾ ಹಳೆಯ ವಚನವ ನೆನೆನೆಯುತ ಸ್ವಾಮಿಪಾದಕೆ ನಮಿಸುತಾ ಬರುತಿರೆ... ಟಗರದು ಹೀಗಂದಿತು:
ಒಂದು ಭಿನ್ನಹ ಬಂಡೆ ಕೇಳು, ಕುದುರೆಗಳಿಹವು ನನ್ನ ಲಾಯದಿ, ಹಗಲುಗನಸು ಕಾಣದೆ ಕೊಟ್ಟ ಒಂಟೆಯ ಹತ್ತಿ ನಡೆ, ವರ್ಷವೈದದು ನಾ ಪೂರೈಪೆನು...
ಬಹುಮತವೇಕೋ, ಸಹಿ ಸಂಗ್ರಹವೇಕೋ ಗಾಳಿಗೆ ಗುದ್ದಿ ಮೈನೋಯಿಸಿಕೊಳ್ಳುವ ವ್ಯರ್ಥ ಕಸರತ್ತೇಕೋ, ಸುಮ್ಮನೆ ಹೇಳಿದಾಗೆ ಕೇಳಿ ಏನೇನು ಬೇಕೋ ಕೇಳಿಕೋ!
ಹೈಕಮಾಂಡೇ ನಮ್ ತಾಯಿ ತಂದೆ, ಕೊಟ್ಟ ವಚನಕ್ಕೆ ತಪ್ಪಿ ನಡೆದರೆ ಮೆಚ್ಚನಾ ಮತದಾರನು...
ಗ್ಯಾರಂಟಿ ಮೇಲೆ ಗ್ಯಾರಂಟಿ ಕೊಟ್ಟಿಹೆನು, ಮುಂದಿನ ಯುದ್ಧದಲ್ಲೂ ನನಗೇ ಗೆಲುವು ಎಂದಬ್ಬರಿಸಿತು ಟಗರದು
ಪಚನವಾಗದಷ್ಟಿದ್ದರೂ ವಚನ ಬಿಡೆನು, ಕಳ್ಳಾಟಕೆ ಸೊಪ್ಪು ಹಾಕೆನು, ತ್ರಿಮೂರ್ತಿಗಳೇ ನನ್ನ ಪೊರೆವರು...
ಬಂಡೆ ಕಟ್ಟುನಿಟ್ಟಿನ ದನಿಯ ಕೇಳಿ, ಇನ್ಯಾವ ಆಟ ಹೂಡ್ವುದೆಂದು ಯೋಚಿಸುತಲಿ ಟಗರು ಕುಳಿತಿರೆ ಲಾಯದ ಅಶ್ವಗಳೆಲ್ಲಾ ಬಂದು ನಿಂತವು ಅಲ್ಲಿಗೆ...
ಯಾವ ಖಾತೆ ಹಿಡಿಯಲಪ್ಪ, ನಿಗಮ, ಮಂಡಳಿಯೂ ಧಕ್ಕದೆ ಕ್ಷೇತ್ರಕ್ಕೆ ಮರಳಿ ಜನಕೆ ಮುಖವ ಹೇಗೆ ತೋರಿಸಲಪ್ಪ?
ತಬ್ಬಲಿಯು ನೀವಲ್ಲ (ಹಿಂ)ಬಾಲಕರೇ, ಹೆಬ್ಬುಲಿ ನಾನಿರುವೆನಲ್ಲ, ಹೈಕಮಾಂಡ್ ಕಾಡಿ ಬೇಡಿ ಖಾತೆ ಕೊಡಿಸಿ ರಕ್ಷಿಪೆ ತಿಳಿಯಿರಿ.
ಬಂಡೆ ಬಂದರೂ ಅದೇ ಕೊಸರು, ಟಗರು ಇದ್ದರೆ ಹಳೇ ಎಸರು... ನಮ್ಮ ಗಂಟಿಗೆ ನಮ್ಮದೇ ಕೈ, ಗಾಳಿ ಬಂದೆಡೆ ತೂರ‍್ಕೊಳೋದೇ ಸೈ ಎಂದವು ಲಾಯದ ಕುದುರೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.