ADVERTISEMENT

ವಾಚಕರ ವಾಣಿ: 07 ಜುಲೈ 2025

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 23:36 IST
Last Updated 6 ಜುಲೈ 2025, 23:36 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಸೂಪರ್‌ ಫಾಸ್ಟ್ ರೈಲು ಓಡಿಸಿ 

ವಿಜಯಪುರದಿಂದ ಬೆಂಗಳೂರಿಗೆ ತಲುಪಲು ಸದ್ಯ ಎರಡು ರೈಲುಗಳಿದ್ದು, 14ರಿಂದ 17 ತಾಸು ಬೇಕಿದೆ. ಆದರೆ, ವಿಜಯಪುರದಿಂದ ಬಾಗಲಕೋಟೆ, ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್‌ ಮಾರ್ಗವಾಗಿ ಬೆಂಗಳೂರಿಗೆ ಒಂದು ಸೂಪರ್ ಫಾಸ್ಟ್ ರೈಲನ್ನು ಓಡಿಸಿದರೆ ತಲುಪಲು ಕೇವಲ 11 ಗಂಟೆ ಸಾಕು. ಹಾಗಾಗಿ, ಈ ಮಾರ್ಗವಾಗಿ ‘ಕೆಎಸ್‌ಆರ್ ಬೆಂಗಳೂರು’ ಅಥವಾ ಕೆಂಗೇರಿ ನಿಲ್ದಾಣಕ್ಕೆ ಒಂದು ಸೂಪರ್ ಫಾಸ್ಟ್ ರೈಲನ್ನು ನಿತ್ಯ ಓಡಿಸಲು ರೈಲ್ವೆ ಇಲಾಖೆಯು ಮುಂದಾಗಬೇಕಿದೆ.  

-ಅಶೋಕ್ ಉಗಾರ, ವಿಜಯಪುರ 

ADVERTISEMENT

ಆಂಗ್ಲ ಮಾಧ್ಯಮ ತರಗತಿ ಒಳ್ಳೆಯದಲ್ಲ

ರಾಜ್ಯ ಸರ್ಕಾರ ಈ ವರ್ಷ ಮತ್ತೆ 4,137 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಮುಂದಾಗಿರುವುದು ಸರಿಯಲ್ಲ. ಸಿಬಿಎಸ್‌ಸಿ ಪಠ್ಯಕ್ರಮ ಅನುಸರಿಸುವ ದೇಶದ ಸುಮಾರು 30 ಸಾವಿರ ಶಾಲೆಗಳಲ್ಲಿ ಆರಂಭಿಕ ಮಗುವಿನ ಶಿಕ್ಷಣ ಮಾತೃಭಾಷೆ ಅಥವಾ ಆಯಾ ರಾಜ್ಯದ ಭಾಷೆಯಲ್ಲಿಯೇ ಪ್ರಸಕ್ತ ವರ್ಷದಿಂದ ಅನುಷ್ಠಾನಗೊಳ್ಳಬೇಕೆಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರದ ನಡೆ ಇದಕ್ಕೆ ವ್ಯತಿರಿಕ್ತವಾಗಿದೆ. ಇತ್ತೀಚೆಗೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಕನಿಷ್ಠ 8ನೇ ತರಗತಿವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಇರಬೇಕೆಂಬ ಕುರಿತ ತಿದ್ದುಪಡಿಗೆ ಅನುಮೋದನೆ ಕೋರಿದ್ದರು. ದ್ವಿಭಾಷಾ ಸೂತ್ರದ ಕುರಿತೂ ಅವರು ಮಾತನಾಡಿದ್ದಾರೆ. ಇವೆಲ್ಲ ಒಂದಕ್ಕೊಂದು ಅಸಂಗತವಾದ ಬೆಳವಣಿಗೆಗಳು. 

ಈಗ ಸರ್ಕಾರ ಕೆಲವು ಶಾಲೆಗಳಲ್ಲಿ ತೆರೆದಿರುವ ಆಂಗ್ಲ ಮಾಧ್ಯಮ ತರಗತಿಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಕುರಿತು ಮೌಲ್ಯಮಾಪನ ಮಾಡಬೇಕು. ಜೊತೆಗೆ, ತನ್ನ ನಿರ್ಧಾರವನ್ನು ಮರುಪರಿಶೀಲಿಸುವುದು ಒಳಿತು.

-ವೆಂಕಟೇಶ ಮಾಚಕನೂರ. ಧಾರವಾಡ

ಒಳ್ಳೆಯ ನಿರ್ಧಾರ

ಸಣ್ಣ ಅಪರಾಧಗಳಿಗೆ ಸಂಬಂಧಿಸಿದ ಕೆಲವು ಕಾನೂನುಗಳನ್ನು ‘ಅಪರಾಧ ಮುಕ್ತ’ಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಒಳ್ಳೆಯ ನಿರ್ಧಾರ (ಪ್ರ.ವಾ., ಜುಲೈ 5). 2023ರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ‘ಜನ ವಿಶ್ವಾಸ’ ಮಸೂದೆಯಲ್ಲಿ ಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಗಳ ನಿರ್ಧಾರ ಸರಿ ಇದೆ. ಅಪರಾಧಿಗಳಿಗೆ ದಂಡದ ಮೊತ್ತ ತುಂಬಲೂ ಕೆಲವೊಮ್ಮೆ ಹಣ ಇರುವುದಿಲ್ಲ. ಈ ಬಗ್ಗೆ ಸರ್ಕಾರ ಕಾನೂನು ತಜ್ಞರ ಬಳಿ ಚರ್ಚಿಸಿ ಯೋಜನೆ ರೂಪಿಸಬೇಕಿದೆ.

- ಬಸಪ್ಪ ಎಸ್. ಮುಳ್ಳೂರ, ಹಲಗತ್ತಿ 

ಯಾತ್ರಿಕರಿಗೆ ಸ್ವಾಗತ: ಖುಷಿ ನೀಡಿತು

ಅಮರನಾಥ ಯಾತ್ರಿಕರಿಗೆ ಕಾಶ್ಮೀರದ ಸ್ಥಳೀಯ ಮುಸ್ಲಿಮರು ಹೂವಿನ ಪಕಳೆಗಳನ್ನು ಚೆಲ್ಲಿ ಸ್ವಾಗತ ಕೋರಿದ್ದಾರೆ. ಪಹಲ್ಗಾಮ್ ಘಟನೆ ಬಳಿಕ ಬಾಡಿಹೋಗಿದ್ದ ಭಾರತೀಯರ ಮನಸ್ಸುಗಳಿಗೆ ಉಲ್ಲಾಸ ನೀಡುವ ಸುದ್ದಿ ಇದಾಗಿದೆ. ಇದನ್ನು ಓದಿ ನನ್ನ ಹೃದಯ ಅರಳಿತು. ಭಾರತೀಯರ ಜೀವನಾಡಿಯಲ್ಲಿ ಸಾಮರಸ್ಯ, ನಂಬಿಕೆ, ಗೌರವ, ಧರ್ಮ ನಿರಪೇಕ್ಷತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿದರ್ಶನ. ನಾಲ್ಕಾರು ದಶಕದ ಹಿಂದೆ ಗ್ರಾಮೀಣ ಪರಿಸರದಲ್ಲಿ ಹಾಸು ಹೊಕ್ಕಾಗಿದ್ದ ಹಿರಿಯರ ಆದರ್ಶ ನಡೆ ನೆನಪಾಯಿತು. 

- ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ

ದ್ವಿಭಾಷಾ ನೀತಿ ಸೂಕ್ತ

‘ಇದು ದ್ವಿಭಾಷಾ ಸೂತ್ರದ ಸಮಯ’ (ಪುರುಷೋತ್ತಮ ಬಿಳಿಮಲೆ, ಪ್ರ.ವಾ., ಜುಲೈ 3) ಬರಹವು ಕನ್ನಡಿಗರ ಕಣ್ತೆರೆಸುವಂತಿದೆ. 1968ರಿಂದಲೇ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಅಳವಡಿಸಿಕೊಂಡ ಕರ್ನಾಟಕಕ್ಕೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಅದು ಹಿಂದಿ ಹೇರಿಕೆಗೆ ಬಳಕೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಳೆದ ವರ್ಷ 1.42 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯ ಹಿಂದಿ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದು ಆಘಾತಕಾರಿ. ಅನಗತ್ಯವಾದ ಭಾಷೆಯೊಂದನ್ನು ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿ ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿರುವುದು ಶೋಚನೀಯ.  

ಹಿಂದಿ ಕಲಿಕೆಯಿಂದ ಕರ್ನಾಟಕದ ಜನರಿಗೆ ಉದ್ಯೋಗದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಉತ್ತರ ಭಾರತದ ಹಿಂದಿ ಭಾಷಿಕರೇ ಕರ್ನಾಟಕದತ್ತ ದುಡಿಮೆಗಾಗಿ ಬರುತ್ತಿದ್ದಾರೆ. ಬಾಲ್ಯದಲ್ಲೇ ಮಕ್ಕಳಿಗೆ ಹಿಂದಿ ಕಲಿಕೆಯನ್ನು ಹೇರುವುದು ಸರ್ವಥಾ ಸಮರ್ಥನೀಯವಲ್ಲ. ಹಿಂದಿಯಾಗಲಿ, ಬೇರಾವುದೇ ಭಾಷೆಯಾಗಲಿ, ಅವರವರ ಅಗತ್ಯಕ್ಕೆ ತಕ್ಕಂತೆ ಆಯ್ಕೆಯಾಗಿರಬೇಕೇ ಹೊರತು ಹೇರಿಕೆಯಾಗಬಾರದು. ರಾಜ್ಯ ಸರ್ಕಾರವು ದ್ವಿಭಾಷಾ ನೀತಿಗೆ ಮರಳುವುದು ಅತ್ಯಂತ ಸೂಕ್ತ. 

- ವಿಕಾಸ್ ಹೆಗಡೆ, ಬೆಂಗಳೂರು 

ಚಾಮುಂಡಿ ಬೆಟ್ಟ: ವಸ್ತ್ರಸಂಹಿತೆ ಜಾರಿಯಾಗಲಿ

‘ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿಯಾಗಬೇಕು. ಇದರಿಂದ ಭಕ್ತರಿಗೂ ಸಮಸ್ಯೆಯಾಗಬಾರದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿರುವುದು ಶ್ಲಾಘನೀಯ. ತಿರುಪತಿ ಮಾದರಿಯಲ್ಲಿ ಚಾಮುಂಡಿ ಬೆಟ್ಟದಲ್ಲಿಯೂ ಮೊಬೈಲ್ ಫೋನ್ ಹಾಗೂ ಇತರ ವಿದ್ಯುನ್ಮಾನ ಸಾಧನಗಳ ಬಳಕೆಗೆ ನಿಷೇಧ ಹೇರಬೇಕು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.