ADVERTISEMENT

ಶುಕ್ರವಾರ, 10–6–1994

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 18:30 IST
Last Updated 9 ಜೂನ್ 2019, 18:30 IST

ಮೇಲ್ಮನೆ:ದಳ ಬಂಡಾಯ ಅಭ್ಯರ್ಥಿ ಗೆಲುವು: ಬೆಂಬಲಿತ ಪಕ್ಷೇತರನಿಗೆ ಸೋಲು

ಬೆಂಗಳೂರು, ಜೂನ್ 9– ವಿಧಾನ ಪರಿಷತ್ತಿಗೆ ಇಂದು ನಡೆದ ಚುನಾವಣೆಯಲ್ಲಿ ಜನತಾ ದಳದ ಬಂಡಾಯ ಅಭ್ಯರ್ಥಿ ವಿ.ಆರ್. ಸುದರ್ಶನ್ ಜಯಭೇರಿ ಮತ್ತು ದಳ ಬೆಂಬಲಿತ ಅಭ್ಯರ್ಥಿ ಸಂದೇಶ್ ನಾಗರಾಜ್ ಅವರ ಸೋಲಿನಿಂದ ಆ ಪಕ್ಷದ ಮುಖಂಡರಿಗೆ ಮುಖಭಂಗವಾದಂತಾಗಿದೆ. ನಿರೀಕ್ಷೆಯಂತೆ ಕಾಂಗೈನ ಎಲ್ಲ 9 ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಬೆಂಬಲಿಗರ ಮತಗಳು ಸೇರಿದಂತೆ ಕನ್ನಡ ಚಳವಳಿ, ಮುಸ್ಲಿಂ ಲೀಗ್ ಹಾಗೂ ದಳದಿಂದಲೇ ಕೆಲವು ಮತಗಳನ್ನು ಪಡೆಯುವುದರೊಂದಿಗೆ ಸುದರ್ಶನ್ ನಿರೀಕ್ಷೆಗೂ ಮೀರಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ದಳದ ಅಧಿಕೃತ ಅಭ್ಯರ್ಥಿ ಎನ್. ತಿಪ್ಪಣ್ಣ ಅವರು 16 ಮತ ಪಡೆದು ಚುನಾವಣೆಯಲ್ಲಿ ಜಯ ಗಳಿಸಿದ್ದರೂ ಅವರಿಗೆ ಪಕ್ಷದಿಂದ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಮತಗಳು ಬಿದ್ದು ಮುಖಂಡರಲ್ಲಿನ ಎರಡೂ ಗುಂಪುಗಳು ಅವರಿಗೆ ದ್ರೋಹ ಬಗೆದಿರುವುದು ಎದ್ದು ಕಾಣುವಂತಾಗಿದೆ.

ADVERTISEMENT

ಧೀರೇಂದ್ರ ಬ್ರಹ್ಮಚಾರಿ ಸಾವು

ಜಮ್ಮು, ಜೂನ್ 9 (ಯುಎನ್‌ಐ)– ವಿವಾದಾತ್ಮಕ ಯೋಗಿ ಧೀರೇಂದ್ರ ಬ್ರಹ್ಮಚಾರಿ ಅವರು ಇಂದು ಮುಂಜಾನೆ ಇಲ್ಲಿಗೆ 100 ಕಿ.ಮೀ. ದೂರದ ಮಂತಲೈದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿ ಸಾವಿಗೀಡಾದರು. ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ದುರಂತದ ತನಿಖೆಗೆ ಆದೇಶಿಸಿದ್ದಾರೆ.

ಬೈರೇಗೌಡ ಸಸ್ಪೆಂಡ್

‌ಬೆಂಗಳೂರು, ಜೂನ್ 9– ಚುನಾವಣೆ ನಂತರ ದಳದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮನೆಯಲ್ಲಿ ತುರ್ತಾಗಿ ಸಭೆ ಸೇರಿದ್ದ ದಳದ ನಾಯಕರು ಪಕ್ಷ ವಿರೋಧಿ ಚಟುವಟಿಕೆ ಆಪಾದನೆ ಮೇಲೆ ಶಾಸಕ ಸಿ. ಬೈರೇಗೌಡ ಅವರನ್ನು ಸಸ್ಪೆಂಡ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.