ADVERTISEMENT

ಪ್ರಜಾವಾಣಿ 25 ವರ್ಷದ ಹಿಂದೆ| ಮಂಗಳವಾರ, 24 ಮಾರ್ಚ್‌ 1998

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 19:30 IST
Last Updated 23 ಮಾರ್ಚ್ 2023, 19:30 IST
ಪ್ರಜಾವಾಣಿ 25 ವರ್ಷಗಳ ಹಿಂದೆ
ಪ್ರಜಾವಾಣಿ 25 ವರ್ಷಗಳ ಹಿಂದೆ   

ಸ್ಪೀಕರ್‌ ಸ್ಥಾನ: ಸಂಗ್ಮಾ– ಬಾಲಯೋಗಿ ಸ್ಪರ್ಧೆ

ನವದೆಹಲಿ, ಮಾರ್ಚ್‌ 23– ಸಂಯುಕ್ತ ರಂಗದಿಂದ ಹೊರಬಂದ ತೆಲುಗು ದೇಶಂ ಪಕ್ಷ ಆಳುವ ಬಿಜೆಪಿಯ ಜತೆ ಕೈಗೂಡಿಸಿ ತನ್ನ ಸದಸ್ಯ ಜಿ.ಎಂ.ಸಿ.ಬಾಲಯೋಗಿ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಆಳುವ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನಾಗಿ ಇಂದು ನಿಲ್ಲಿಸಿತು.

ಇದರಿಂದ ಹನ್ನೆರಡನೇ ಲೋಕಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಈಗ ಚುನಾವಣೆ ಅನಿವಾರ್ಯವಾಗಿದೆ.

ADVERTISEMENT

ಕಾಂಗ್ರೆಸ್‌–ಸಂಯುಕ್ತ ರಂಗ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಪಿ.ಎ.ಸಂಗ್ಮಾ ಅವರು ಸಹಾ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಸ್ಪೀಕರ್‌ ಸ್ಥಾನದ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಫಲಿತಾಂಶವು ವಿಶ್ವಾಸ ಮತದ ಭವಿಷ್ಯದ ದಿಕ್ಸೂಚಿಯಾಗಲಿದೆ.

ಕಾಂಗ್ರೆಸ್‌ಗೆ ರಂಗ ಬೆಂಬಲ ನಿರ್ಧಾರ: ನಾಯ್ಡು ಟೀಕೆ

ನವದೆಹಲಿ, ಮಾರ್ಚ್‌ 23– ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವ ಸಂಯುಕ್ತ ರಂಗದ ತೀರ್ಮಾನವು ಪ್ರಮುಖ ವಿಷಯಗಳ ಬಗೆಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕೆನ್ನುವ ಮೂಲ ಬೇರನ್ನೇ ಕಡಿದು ಹಾಕಿದಂತಾಗಿದೆ ಎಂದು ತೆಲುಗು ದೇಶಂ ನಾಯಕ ಎನ್‌.ಚಂದ್ರಬಾಬು ನಾಯ್ಡು ಅವರು ರಂಗದ ತೀರ್ಮಾನವನ್ನು ಕಟುವಾಗಿ ಟೀಕಿಸಿದ್ದಾರೆ.

ರಂಗದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ಬರೆದಿರುವ ಪತ್ರವನ್ನು ಇಲ್ಲಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ನಾಯ್ಡು ಅವರು, ರಂಗದ ಸಂಚಾಲಕರಾಗಿರುವ ತಮಗೆ ಗೊತ್ತಿಲ್ಲದಂತೆ ಮತ್ತು ತಮ್ಮನ್ನು ಕಡೆಗಣಿಸಿ ತೆಗೆದುಕೊಂಡಿರುವ ಈ ಏಕಪಕ್ಷೀಯ ನಿರ್ಧಾರ ತತ್ವರಹಿತವಾದುದು ಎಂದು ಕಟುವಾಗಿ ಟೀಕಿಸಿದ್ದಾರೆ. ತಾವು ತಮ್ಮ ಅಭಿಪ್ರಾಯ ಮತ್ತು ಭಾವನೆಯನ್ನು ಸ್ಪಷ್ಟವಾಗಿ ತಿಳಿಸಿದ್ದರೂ ನಿನ್ನೆ ಸಂಜೆ ರಂಗದ ಉನ್ನತ ಸಮಿತಿ ಕೈಗೊಂಡ ತೀರ್ಮಾನ ಸರಿಯಾದುದಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.