ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ, ಜೂನ್‌ 23, 1997

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 19:31 IST
Last Updated 22 ಜೂನ್ 2022, 19:31 IST
   

ಪರೀಕ್ಷೆಯಲ್ಲಿ ಕಾಪಿ– ಶಿಕ್ಷಣ ಸಚಿವರ ಆರೋಪ ಮುಕ್ತಿ: ಕುಲಪತಿ ಕಟ್ಟುಕತೆಗೆ ಖಂಡನೆ

ಬೆಂಗಳೂರು, ಜೂನ್‌ 22– ರಾಜ್ಯದ ಉನ್ನತ ಸಚಿವ ಬಿ. ಸೋಮಶೇಖರ್‌ ಅವರು 70ರ ದಶಕದಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಲ್‌.ಎಲ್‌.ಬಿ. ಪರೀಕ್ಷೆಯಲ್ಲಿ ಕಾಪಿ ಮಾಡಿದ್ದರೆಂಬ ಆರೋಪದಿಂದ ಮುಕ್ತಿಗೊಳಿಸಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಚ್‌. ನಾಗರಾಜ ಶೆಟ್ಟಿ ಅವರು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಸೋಮಶೇಖರ್‌ ಅವರು ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಪ್ರಥಮ ಎಲ್‌.ಎಲ್‌.ಬಿ ಪರೀಕ್ಷೆಯಲ್ಲಿ ಕಾಪಿ ಮಾಡಿ ಪರೀಕ್ಷಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರೆಂದು ಕೆಲವು ಪತ್ರಿಕೆಗಳಲ್ಲಿ ಬಂದ ವರದಿಗಳನ್ನಾಧರಿಸಿ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎನ್‌.ಆರ್‌. ಶೆಟ್ಟಿ ಅವರು ನೀಡಿದ ವರದಿಯ ನಂತರ ಸತ್ಯಾಸತ್ಯತೆ ಪರಿಶೀಲಿಸಿ ತನಿಖೆ ನಡೆಸಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸಂಬಂಧಿಸಿದ ಇಲಾಖೆಗಳೊಂದಿಗೆ 16 ಪುಟಗಳ ಸುದೀರ್ಘ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿರುವುದು ಈಗ ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.

ADVERTISEMENT

ಇಡೀ ವರದಿಯಲ್ಲಿ ಸೋಮಶೇಖರ್‌ ಅವರನ್ನು ಕಾಪಿ ಮಾಡಿದ ಆರೋಪದಿಂದ ಮುಕ್ತಗೊಳಿಸಿರುವುದಷ್ಟೇ ಅಲ್ಲ: ಈ ವಿಚಾರದಲ್ಲಿ ಅವರ ವಿರುದ್ಧ ಮಾಡಿರುವ ಆರೋಪಗಳು ಹಾಗೂ ಸೃಷ್ಟಿಸಿರುವ ದಾಖಲೆಗಳಲ್ಲಿ ಒಂದಕ್ಕೊಂದು ಸಂಬಂಧವಿಲ್ಲದ ಕಾರಣ ಪ್ರಕರಣ ಕೇವಲ ಕಟ್ಟುಕತೆ ಎಂಬ ಅಂಶವನ್ನು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

3 ತಿಂಗಳಲ್ಲಿ ರೈತರ ವಿದ್ಯುತ್‌ ಬಾಕಿ ವಸೂಲಿಗೆ ಗಡುವು

ಬೆಂಗಳೂರು, ಜೂನ್‌ 22– ನೀರಾವರಿ ಪಂಪ್‌ಸೆಟ್‌ಗಳನ್ನು ಬಳಸುತ್ತಿರುವ ರೈತರಿಂದ ಮೂರು ತಿಂಗಳ ಒಳಗೆ ಬಾಕಿ ಹಣವನ್ನು ವಸೂಲು ಮಾಡಬೇಕು ಎಂದು ಕರ್ನಾಟಕ ವಿದ್ಯುತ್‌ ಮಂಡಳಿ (ಕೆಇಬಿ) ಕಾರ್ಯವೈಖರಿ ಬಗ್ಗೆ ಅಧ್ಯಯನಕ್ಕಾಗಿ ರಚಿಸಲಾದ ರಾಜ್ಯ ಸಚಿವ ಸಂಪುಟದ ಉಪ ಸಮಿತಿ ಗಡುವು ನೀಡಿದೆ.

ಇಂದು ನಡೆದ ಕೆಇಬಿ ಇಂಜಿನಿಯರುಗಳು ಸಂಘದ 34ನೇ ಸರ್ವ ಸದಸ್ಯರ ಮಹಾ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಕೆಇಬಿ ಅಧ್ಯಕ್ಷ ವಿಜಯ ಗೋರೆ, ‘ಗಡುವಿನ ಅವಧಿಯೊಳಗೆ ಬಾಕಿ ಉಳಿದಿರುವ ಹಣವನ್ನು ವಸೂಲು ಮಾಡುವಲ್ಲಿ ವಿಫಲವಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ಕೆಇಬಿ ಅಧ್ಯಕ್ಷರಿಗೆ ಉಪ ಸಮಿತಿ ಸೂಚಿಸಿದೆ. ಒಂದು ವರ್ಷದ ಹಿಂದೆ ತೆರಿಗೆ ಜಾರಿ ಮಾಡಿದ್ದರೂ ಅಧಿಕಾರಿಗಳು ರೈತರಿಂದ ಬಾಕಿ ಹಣವನ್ನು ವಸೂಲು ಮಾಡದಿರುವ ಬಗ್ಗೆ ಕಳೆದ ಉಪ ಸಮಿತಿ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.