ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಮಂಗಳವಾರ, 30–1–1996

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 15:38 IST
Last Updated 29 ಜನವರಿ 2021, 15:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹವಾಲಾ ಹಣ: ಪ್ರಾಸಿಕ್ಯೂಷನ್‌ ಕ್ರಮ ಎರಡು ವಾರ ಮುಂದಕ್ಕೆ

ನವದೆಹಲಿ, ಜ. 29 (ಯುಎನ್‌ಐ, ಪಿಟಿಐ)– ಹವಾಲಾ ಹಗರಣದಲ್ಲಿ ಏಳು ಮಂದಿ ರಾಜಕಾರಣಿಗಳ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಸಿಬಿಐ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ವಿ.ಬಿ.ಗುಪ್ತಾ ಅವರು ಫೆಬ್ರುವರಿ 15ಕ್ಕೆ ಮುಂದೂಡಿದರು.

ಈ ನಡುವೆ, ಜೈನ್‌ ಸಹೋದರರಿಂದ ಪಕ್ಷವು ಯಾವುದೇ ರೀತಿಯ ಹಣ ಸ್ವೀಕರಿಸಿಲ್ಲ ಎಂದು ಕಾಂಗೈ ವಕ್ತಾರ ವಿ.ಎನ್‌.ಗಾಡ್ಗೀಳ್‌ ಸ್ಪಷ್ಟಪಡಿಸಿದರು.

ADVERTISEMENT

ಅರೆನ್ಯಾಯಾಂಗ ಆಯೋಗ: ಕಾಯ್ದಿಟ್ಟ ತೀರ್ಪು

ನವದೆಹಲಿ, ಜ. 29 (ಪಿಟಿಐ)– ರಾಜಕಾರಣಿ– ಅಧಿಕಾರಿ ಹಾಗೂ ಅಪರಾಧಿಗಳ ನಡುವಣ ಅಪವಿತ್ರ ಮೈತ್ರಿ ಬಗ್ಗೆ ವೋರಾ ಸಮಿತಿ ನೀಡಿರುವ ವರದಿ ಅನ್ವಯ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಉಸ್ತುವಾರಿಗಾಗಿ ಅರೆನ್ಯಾಯಾಂಗ ಆಯೋಗವೊಂದನ್ನು ರಚಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ ಇಂದು ಕಾಯ್ದಿಟ್ಟಿತು.

ರಾಜಕಾರಣಿಗಳು ಹಾಗೂ ಅಪರಾಧಿಗಳ ನಡುವೆ ಇರುವ ಅಕ್ರಮ ಸಂಬಂಧಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ರಚಿಸಿರುವ ಸ್ಥಾಯಿ ಸಮಿತಿಯ ಶಿಫಾರಸುಗಳು ಸಮರ್ಪಕವಾಗಿ ಜಾರಿಗೊಳ್ಳಲು ಇಂಥ ವ್ಯವಸ್ಥೆ ಅಗತ್ಯ ಎಂದು ಅರ್ಜಿದಾರರ ಪರವಾಗಿ ವಕೀಲ ರಾಂ ಜೇಠ್ಮಲಾನಿ ವಾದಿಸಿದರು. ಅರೆನ್ಯಾಯಾಂಗ ಆಯೋಗದಲ್ಲಿ ಅಪರಾಧ ಪ್ರಕರಣಗಳ ಅನುಭವ ಇರುವ ಸುಪ್ರೀಂ ಕೋರ್ಟಿನ ಇಬ್ಬರು ನಿವೃತ್ತ ನ್ಯಾಯಾಧೀಶರು ಒಳಗೊಂಡಿರಬೇಕು. ಇವರಿಗೆ ಸುಪ್ರೀಂ ಕೋರ್ಟಿನ ಪ್ರಾತಿನಿಧಿಕ ಅಧಿಕಾರ ಇರಬೇಕು. ಸಂಪುಟ ಕಾರ್ಯದರ್ಶಿ ನೇತೃತ್ವದ ಸ್ಥಾಯಿ ಸಮಿತಿ ಸಂಗ್ರಹಿಸುವ ಮಾಹಿತಿಗಳನ್ನು ಆಯೋಗ ಪರಿಶೀಲಿಸಬೇಕು. ಆಯೋಗ ಉಸ್ತುವಾರಿ ಪಾತ್ರ ನಿರ್ವಹಿಸಬೇಕು ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.