ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶನಿವಾರ, 10.2.1996

25 years ago 10-2-1996

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:30 IST
Last Updated 9 ಫೆಬ್ರುವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕನ್ನಡ ಚಿತ್ರಗಳ ನಿರ್ಲಕ್ಷ್ಯದ ವಿರುದ್ಧ ಭಾರಿ ಪ್ರದರ್ಶನ

ಬೆಂಗಳೂರು, ಫೆ. 9– ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಆದ್ಯತೆ, ಚಿತ್ರಮಂದಿರಗಳ ಬಾಡಿಗೆ ದರ ನಿಯಂತ್ರಣ, ಗಗನಕ್ಕೇರಿರುವ ಪ್ರವೇಶ ದರದಲ್ಲಿ ಇಳಿತ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.

ಪರಭಾಷಾ ಚಿತ್ರಗಳನ್ನು ಆಯಾ ರಾಜ್ಯದಲ್ಲಿ ಬಿಡುಗಡೆಯಾದ 16 ವಾರ ಗಳಿಗೂ ಮುಂಚೆ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂಬುದು ಚಿತ್ರರಂಗದ ಮುಖ್ಯ ಬೇಡಿಕೆಗಳಲ್ಲಿ ಸೇರಿದೆ.

ADVERTISEMENT

ಕೂಲಿ ಮಾಡಬೇಕಾದೀತು: ಡಾ. ರಾಜ್

ಬೆಂಗಳೂರು, ಫೆ. 9– ಚಿತ್ರಮಂದಿರ ಗಳಲ್ಲಿ ಆರು ತಿಂಗಳ ಕಾಲ ಕನ್ನಡ ಚಿತ್ರಗಳ ಕಡ್ಡಾಯ ಪ್ರದರ್ಶನ, ಪ್ರವೇಶ ದರ ಹಾಗೂ ಬಾಡಿಗೆ ದರ ಇಳಿಯದಿದ್ದಲ್ಲಿ ಕನ್ನಡ ನಿರ್ಮಾಪಕರು, ತಂತ್ರಜ್ಞರು ಗಂಟುಮೂಟೆ ಕಟ್ಟಿಕೊಂಡು ಕೂಲಿ ನಾಲಿ ಮಾಡಬೇಕಾದಂಥ ಪರಿಸ್ಥಿತಿ ನಿರ್ಮಾಣವಾದೀತು ಎಂದು ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರು ಇಂದು ಇಲ್ಲಿ ಎಚ್ಚರಿಸಿದರು.

ಕನ್ನಡ ಚಿತ್ರರಂಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಪ್ರದರ್ಶನದ ನೇತೃತ್ವ ವಹಿಸಿ, ಸ್ಟೇಟ್ಸ್, ಸಾಗರ್ ಹಾಗೂ ತ್ರಿಭುವನ್ ಚಿತ್ರಮಂದಿರಗಳ ಮುಂದೆ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಉಳಿಸಲು ಅ.ನ.ಕೃಷ್ಣರಾಯರು, ಮ.ರಾಮಮೂರ್ತಿ ಮುಂತಾದವರು ನಡೆಸಿದಂಥ ಹೋರಾಟವನ್ನು ಇಂದು ಮತ್ತೆ ಮಾಡಬೇಕಾಗಿ ಬಂದಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.

ಬಿಸಿಲನ್ನೂ ಲೆಕ್ಕಿಸದೆ, ಚಲಿಸುವ ವಾಹನದ ಮೇಲೆ ನಿಂತು ಮಾತನಾಡಿದ ಡಾ.ರಾಜ್ ಅವರು ‘ಮೌನ ಮೆರವಣಿಗೆಯಾದರೂ ಮಾತನಾಡಲೇಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರ ಮಂದಿರದ ಮಾಲೀಕರಾದರೂ ನಮ್ಮ ವರೇ, ಕನ್ನಡದವರೇ, ಅವರನ್ನಲ್ಲದೆ ನಾವು ಇನ್ಯಾರನ್ನು ಕೇಳಲು ಸಾಧ್ಯ? ಅಲ್ಪಸ್ವಲ್ಪ ತ್ಯಾಗದ ಮೂಲಕ ಅವರು ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಬೇಕು ಎಂದರು.

ಪ್ರವೇಶ ದರ ಇಳಿತ: 15ರಂದು ನಿರ್ಧಾರ

ಬೆಂಗಳೂರು, ಫೆ. 9– ಚಿತ್ರಮಂದಿರಗಳ ಬಾಡಿಗೆ ಹಾಗೂ ಪ್ರವೇಶ ದರ ಇಳಿಕೆ ಸೇರಿದಂತೆ ಚಲನಚಿತ್ರ ನಿರ್ಮಾಪಕ–ನಿರ್ದೇಶಕರ ಸಂಘದ ನಾಲ್ಕು ಬೇಡಿಕೆಗಳ ಸಂಬಂಧ ಮುಂದಿನ ಗುರುವಾರ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.