ADVERTISEMENT

ಶನಿವಾರ, 12–4–1969

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 18:30 IST
Last Updated 11 ಏಪ್ರಿಲ್ 2019, 18:30 IST

ಜನರಿಗೆ ತೊಂದರೆ ಕೊಡುವ ಅಧಿಕಾರಿಗಳಿಗೆಶಿಕ್ಷಿಸುವುದು ಸೂಕ್ತ ಎಂದು ಮುಖ್ಯಮಂತ್ರಿ

ಬೆಂಗಳೂರು, ಏ. 11– ಸರ್ಕಾರಿ ಅಧಿಕಾರಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ನಿರ್ದಿಷ್ಟವಾಗಿ ದೂರುಗಳು ಬಂದರೆ ಅಂತಹ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸುವುದು ಒಳ್ಳೆಯದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು
ಇಂದು ವಿಧಾನ ಪರಿಷತ್ತಿನಲ್ಲಿಹೇಳಿದರು.

ಜನರಿಗೆ ತೊಂದರೆ ಕೊಡುತ್ತಾರೆಂದು ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗ ಮಾಡುವುದು ಪರಿಹಾರವಲ್ಲವೆಂದು ಶ್ರೀ ವೀರೇಂದ್ರಪಾಟೀಲ್ ಅವರು ಅಭಿಪ್ರಾಯಪಟ್ಟರು.

ADVERTISEMENT

ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ವರ್ಷ ಎಷ್ಟು ಮಂದಿ ಅಧಿಕಾರಿಗಳು ಇದ್ದಾರೆಂಬುದರ ಬಗ್ಗೆ ಶ್ರೀ ಜಿ.ವಿ. ಆಂಜನಪ್ಪ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಅವರು ಉತ್ತರ ನೀಡಿ, ಪ್ರತಿಯೊಂದು ಜಿಲ್ಲೆಯಲ್ಲೂ ಗೆಜೆಟೆಡ್ ಹುದ್ದೆಯ ಅಧಿಕಾರಿಗಳು ಬಹಳ ಸಂಖ್ಯೆಯಲ್ಲಿರುತ್ತಾರೆಂದರು.

ತೆಲಂಗಾಣ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ಎಂಟು ಅಂಶಗಳ ಯೋಜನೆ

ನವದೆಹಲಿ, ಏ. 11– ಆಂಧ್ರ ಪ್ರದೇಶದ ಐಕ್ಯಮತ್ಯ ಮತ್ತು ಸಮಗ್ರತೆಯನ್ನು ಕಾಪಾಡುವ ಹಾಗೂ ಬಲಪಡಿಸುವ ದೃಷ್ಟಿಯಿಂದ ತೆಲಂಗಾಣ ಸಮಸ್ಯೆಗೆ ತುರ್ತಾಗಿ, ಕ್ರಿಯಾತ್ಮಕ ಪರಿಹಾರಗಳನ್ನು ಹುಡುಕಲು ಕೇಂದ್ರ ಸರ್ಕಾರ ದೃಢ ಮನಸ್ಸು ಮಾಡಿದೆ ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ತೆಲಂಗಾಣ ಹೆಚ್ಚುವರಿ ಪ್ರಶ್ನೆ ಕುರಿತು ನಿರ್ಧರಿಸಲು ನಿವೃತ್ತ ಅಥವಾ ವೃತ್ತಿಯಲ್ಲಿರುವ ನ್ಯಾಯಾಧೀಶರೊಬ್ಬರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರದ ಆಯೋಗವನ್ನು ನೇಮಿಸುವುದಾಗಿ ಶ್ರೀಮತಿ ಗಾಂಧಿ ಪ್ರಕಟಿಸಿದರು.

ರಾಜ್ಯದ ಹಣಕಾಸುಗಳ ನಿಖರ ಮಾಹಿತಿ ಇರುವ ಪ್ರಸಿದ್ಧ ಅರ್ಥಶಾಸ್ತ್ರಜ್ಞ, ಆಡಿಟರ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಈ ಆಯೋಗದಲ್ಲಿರುವರು. ಮೇ ಅಂತ್ಯಕ್ಕೆ ಆಯೋಗ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದು.

ಎಂಟು ಅಂಶಗಳ ಯೋಜನೆ: ತೆಲಂಗಾಣದ ಪ್ರಸಕ್ತ ಬಿಕ್ಕಟ್ಟನ್ನು ಇತ್ಯರ್ಥಪಡಿಸುವ ಎಂಟು ಅಂಶಗಳ ಯೋಜನೆಯ ರೂಪುರೇಷೆಗಳನ್ನು ವಿವರಿಸುತ್ತಾ, ತಮ್ಮ ಈಗಿನ ಆಂದೋಲನವನ್ನು ಮುಕ್ತಾಯಗೊಳಿಸಲು ತೆಲಂಗಾಣ ಪ್ರದೇಶದ ಜನರಿಗೆ ಶ್ರೀಮತಿ ಗಾಂಧಿ ಮನವಿ ಮಾಡಿಕೊಂಡರು.

ಮೈಸೂರು–ಮಹಾರಾಷ್ಟ್ರ ಗಡಿ ಪ್ರಶ್ನೆ ಜನಮತಗಣನೆ ಮತ್ತಿತರ ಸಲಹೆ ಪರಿಶೀಲನೆಯಲ್ಲಿ

ನವದೆಹಲಿ, ಏ. 11– ಮೈಸೂರು– ಮಹಾರಾಷ್ಟ್ರ ಗಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಜನಮತಗಣನೆಯೂ ಸೇರಿ ಇತರ ಕೆಲವು ಸಲಹೆಗಳು ಪರಿಶೀಲನೆಯಲ್ಲಿವೆ ಎಂದು ಗೃಹಖಾತೆ ಸ್ಟೇಟ್ ಸಚಿವ ವಿದ್ಯಾಚರಣ್ ಶುಕ್ಲಾ ಇಂದು ಲೋಕಸಭೆ
ಯಲ್ಲಿ ಬಾಬುರಾವ್ ಪಟೇಲ್ ಅವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.