ADVERTISEMENT

ಮಂಗಳವಾರ, 29–4–1969

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 20:15 IST
Last Updated 28 ಏಪ್ರಿಲ್ 2019, 20:15 IST

ಅಧ್ಯಕ್ಷ ಡಿಗಾಲ್ ರಾಜೀನಾಮೆ: ಜನಮತಕ್ಕೆ ಮಣಿದು ಅಧಿಕಾರ ತ್ಯಾಗ

ಪ್ಯಾರಿಸ್, ಏ. 28– ಭಾನುವಾರ ನಡೆದ ಜನಮತಗಣನೆಯಲ್ಲಿ ಭಾರಿ ಪರಾಭವ ಹೊಂದಿದ ನಂತರ ಜನರಲ್ ಡಿಗಾಲ್ ಅವರು ಇಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಇತ್ತು, ಫ್ರಾನ್ಸಿನ ಇತಿಹಾಸಕ್ಕೆ ಶಕವೊಂದನ್ನು ಅಂತ್ಯಗೊಳಿಸಿದರು. ಸೆನೆಟ್ ಅಧ್ಯಕ್ಷ ಆಲೈನ್ ಪೋಹೆರ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ನಿನ್ನೆ ಮಧ್ಯರಾತ್ರಿ ಕಳೆದ ಸ್ವಲ್ಪ ಹೊತ್ತಿನ ನಂತರ ಅಧ್ಯಕ್ಷರ ನಿವಾಸವಾದ ಎಲಿಸಿ ಅರಮನೆಯಿಂದ ಹೊರಟ ಮೂರು ಸಾಲುಗಳ ಹೇಳಿಕೆ ಈ ರೀತಿ ಇದೆ:

ADVERTISEMENT

‘ಈ ಗಣರಾಜ್ಯದ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳ ನಿರ್ವಹಣೆಯನ್ನು ನಾನು ನಿಲ್ಲಿಸುತ್ತೇನೆ. ಈ ನಿರ್ಧಾರ ಇಂದು ಮಧ್ಯಾಹ್ನದಿಂದ ಜಾರಿಗೆ ಬರುತ್ತದೆ.’

ಆಡಳಿತ ವಿಕೇಂದ್ರೀಕರಣ ಹಾಗೂ ಸೆನೆಟ್ ಸುಧಾರಣೆಯ ಬಗ್ಗೆ ನಿನ್ನೆ ನಡೆದ ಜನಮತ ಗಣನೆಯಲ್ಲಿ ಪರಾಭವಗೊಂಡ ನಂತರ ಅಧ್ಯಕ್ಷರು ಈ ನಿರ್ಧಾರ ಕೈಗೊಂಡರು.

ಕಾಂಗ್ರೆಸ್ ಅಧ್ಯಕ್ಷರ ಭಾಷಣ ಕುರಿತು ಚರ್ಚಿಸಲು ರಹಸ್ಯ ಎ.ಐ.ಸಿ.ಸಿ.ಗಾಗಿ ಕೋರಿಕೆ?

ನೇಕಿರಾಮ್‌ನಗರ, ಏ. 28– ಕಾಂಗ್ರೆಸ್ ಪಕ್ಷದ ಅಂಗೀಕೃತ ನೀತಿಗಳಿಂದ ಶ್ರೀ ಎಸ್. ನಿಜಲಿಂಗಪ್ಪನವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ‘ದೂರ ಸರಿದಿರುವ’ ಬಗ್ಗೆ ಚರ್ಚಿಸಲು ಎ.ಐ.ಸಿ.ಸಿ.ಯ ವಿಶೇಷ ರಹಸ್ಯ ಅಧಿವೇಶನ ಕರೆಯುವಂತೆ ಕೋರಿಕೆ ಸಲ್ಲಿಸಲು ಪ್ರಯತ್ನ ನಡೆಯುತ್ತಿದೆ.

ಅಂತಹ ಸಭೆಗೆ ಅಗತ್ಯವಾಗಿರುವ ಐವತ್ತು ಜನರ ಸಹಿಗಳನ್ನು ಸಂಗ್ರಹಿಸುವ ವಿಶ್ವಾಸ ಈ ಪ್ರಯತ್ನ ನಡೆಸುತ್ತಿರುವವರಿಗೆ ಇದೆಯೆಂದು ಗೊತ್ತಾಗಿದೆ.

ಇದೇ ರೀತಿ ಸಭೆ ಸೇರಿಸಲು ಬಂದ ಕೋರಿಕೆಯ ಪ್ರಕಾರ 1967ರ ಜೂನ್ ತಿಂಗಳಲ್ಲಿ ಎ.ಐ.ಸಿ.ಸಿ. ಸಭೆ ಸೇರಿತ್ತು.

ಹೆಲಿಕಾಪ್ಟರ್ ಅಪಘಾತದಲ್ಲಿ ಬೊಲಿವಿಯಾ ಅಧ್ಯಕ್ಷರ ಸಾವು

ಲಾಪಾಸ್‌ (ಬೊಲಿವಿಯಾ), ಏ. 28– ಬೊಲಿವಿಯಾದ ಅಧ್ಯಕ್ಷ ರೇನೆ ಬಾರಿಯಂಟಾಸ್ ಅರ್ಟ್ಸೂನೊ ಅವರು ಭಾನುವಾರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದರು. ಅವರ ಉತ್ತರಾಧಿಕಾರಿಯಾಗಿ ಕೂಡಲೇ ಉಪಾಧ್ಯಕ್ಷ ಲೂಯಿ ಅಡಾಲ್ಫೊ ಸೈಲ್ಸ್ ಸಾಲಿನಾಸ್ ಅವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

1966ರಲ್ಲಿ ಚುನಾಯಿತರಾದ ನಲವತ್ತೊಂಬತ್ತು ವರ್ಷ ವಯಸ್ಸಿನ ಬಾರಿಯಂಟಾಸ್ ಅವರು ದಕ್ಷಿಣದಲ್ಲಿರುವ ಓರ್‍ಸುರೊ ಪ್ರದೇಶದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸುತ್ತಿದ್ದಾಗ ಅವರಿದ್ದ ಹೆಲಿಕಾಪ್ಟರು ವಿದ್ಯುತ್ ತಂತಿಗೆ ತಗುಲಿ ಅಪಘಾತಕ್ಕೊಳಗಾಯಿತೆಂದು ಪ್ರಥಮ ವರದಿಗಳು ತಿಳಿಸಿವೆ.

ಅಪಘಾತದಲ್ಲಿ ಹೆಲಿಕಾಪ್ಟರಿನ ಮೂವರು ಚಾಲಕರೂ ಮೃತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.