ADVERTISEMENT

ಶುಕ್ರವಾರ, 25–10–1968

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 20:00 IST
Last Updated 24 ಅಕ್ಟೋಬರ್ 2018, 20:00 IST

ನಗರವಾರ್ಸಿಟಿ ನಿರ್ಧಾರ: ಕುವೆಂಪು ಅವರಿಗೆ ಗೌರವಡಿ. ಲಿಟ್.

ಬೆಂಗಳೂರು, ಅ. 24– ರಾಷ್ಟ್ರಕವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಡಾ. ಕೆ.ವಿ. ಪುಟ್ಟಪ್ಪ ಮತ್ತು ಗುಜರಾತ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಉಮಾಶಂಕರ ಜೋಷಿ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ಗೌರವ ಪದವಿಗಳನ್ನು ನೀಡಲು ಬೆಂಗಳೂರು ವಿಶ್ವವಿದ್ಯಾನಿಲಯ ನಿರ್ಣಯಿಸಿದೆ.

ಆ ಬಗ್ಗೆ ಸಿಂಡಿಕೇಟ್ ಮಾಡಿದ್ದ ಸಲಹೆಯನ್ನು ನಿನ್ನೆ ಸೆನೆಟ್ ಸಭೆ ಮಾನ್ಯ ಮಾಡಿತು.

ADVERTISEMENT

ಒಲಿಂಪಿಕ್ ಹಾಕಿ: ಎಕ್ಸ್‌ಟ್ರಾ ಟೈಂ ಗೋಲು; ಭಾರತಕ್ಕೆ ಸೋಲು

ಭಾರತ–1 ಆಸ್ಟ್ರೇಲಿಯ–2

(ವರದಿ: ಕೆ.ಎ. ನೆಟ್ಟಕಲ್ಲಪ್ಪ)

ಮೆಕ್ಸಿಕೋ ನಗರ, ಅ. 24– ಒಲಿಂಪಿಕ್ ಹಾಕಿ ಟೂರ್ನಮೆಂಟಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಫೈನಲ್ ರೌಂಡಿನಲ್ಲಿ ಈ ಸಾರಿ ಭಾರತ ಇರುವುದಿಲ್ಲ.

ಕಳೆದ ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದ ಭಾರತವು ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ 1–2 ಗೋಲುಗಳಿಂದ ಆಸ್ಟ್ರೇಲಿಯದ ಕೈಲಿ ಪರಾಭವ ಅನುಭವಿಸಿತು.

ಇಂದಿನ ರೋಮಾಂಚಕಾರಿ ಪಂದ್ಯದ ವಿಜಯ ನಿರ್ಧರಿಸಲು ಎಕ್ಸ್‌ಟ್ರಾ ಟೈಂ ಅಗತ್ಯವಾಯಿತು.

ವೀರೇಂದ್ರಕುಮಾರ ಹೆಗ್ಗಡೆ ಅವರ ಪಟ್ಟಾಭಿಷೇಕ

ಮಂಗಳೂರು, ಅ. 24– ಇಂದು ಮಧ್ಯಾಹ್ನ ಅಬಾಜಿನ್ ಮುಹೂರ್ತದಲ್ಲಿ ಶ್ರೀ ಧರ್ಮಸ್ಥಳ ನೆಲಿಯಾಡಿಬೀಡಿನಲ್ಲಿ ಧರ್ಮದೈವಗಳು ದಿವಂಗತ ಶ್ರೀ ರತ್ನವರ್ಮ ಹೆಗ್ಗಡೆ ಅವರಹಿರಿಯ ಕುವರ ಶ್ರೀ ವೀರೇಂದ್ರ ಕುಮಾರ ಹೆಗ್ಗಡೆ ಅವರನ್ನು ಶ್ರೀ ಧರ್ಮಸ್ಥಳದ ಪಟ್ಟಾಧಿಕಾರಿಯನ್ನಾಗಿ ಮಾಡಿ ಬೀಡಿನ ದೈವಗಳು ಉಯ್ಯಾಲೆಯಲ್ಲಿ ಕುಳ್ಳಿರಿಸಿ ‘ಹೆಗ್ಗಡೆ’ ಎಂದು ಸಾರಿ ತೂಗಿದರು.

ಮುಂಜಾನೆ 8 ಗಂಟೆಯಿಂದ ಪ್ರಾರಂಭವಾದ ಈ ಸಮಾರಂಭದ ಮೊದಲ ಕಾರ್ಯಕ್ರಮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ನೂತನ ಹೆಗ್ಗಡೆ ಅವರಿಗೆ ವಿಧಿಪೂರ್ವಕ ಪೂಜಾದಿ ಕ್ರಮಗಳು ನಡೆದು ಅನಂತರ ನೆಲಿಯಾಡಿ ಬೀಡಿನಲ್ಲಿ ಪಟ್ಟಾಭಿಷೇಕದ ಕಾರ್ಯಗಳು 12 ಗಂಟೆಗೆ ಅಬಾಜಿನ್ ಮುಹೂರ್ತದಲ್ಲಿ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.