ವೀರಶೈವ: ಆದರ್ಶ ಸಿದ್ಧಾಂತ ಜಾತಿ ಆಗಿ ಪರಿಣಮಿಸಿದೆ: ಎಚ್.ಎಂ.ಸಿ ವಿಷಾದ
ಬೆಂಗಳೂರು, ಡಿ. 24– ನಾನಾ ಕಾರಣಗಳಿಂದಾಗಿ ವೀರಶೈವ ಎಂಬುದು ಇತ್ತೀಚೆಗೆ ಒಂದು ಜಾತಿ, ಒಂದು ಮತ ಎನ್ನುವ ಸ್ಥಿತಿಗೆ ಇಳಿದಿರುವುದು ‘ದುರ್ದೈವದ ಸಂಗತಿ’ ಎಂದು ಲೋಕೋಪಯೋಗಿ ಸಚಿವ ಎಚ್.ಎಂ. ಚನ್ನಬಸಪ್ಪ ವಿಷಾದಿಸಿದರು.
ವೀರಶೈವ ಎಂಬುದು ಒಂದು ಜಾತಿಯಲ್ಲ. ಇದೊಂದು ಆದರ್ಶ, ಧಾರ್ಮಿಕ ಸಮಾಜ ಸಿದ್ಧಾಂತ ಎಂದು ಅವರು ಸ್ಪಷ್ಟಪಡಿಸಿದರು.
ವೀರಶೈವ ಅಧಿಕಾರಿಗಳನ್ನು ಬಗ್ಗುಬಡಿಯುವ ಕುಯುಕ್ತಿ ವಿರುದ್ಧ ವೀರೇಂದ್ರ ಎಚ್ಚರಿಕೆ
ಬೆಂಗಳೂರು, ಡಿ. 24– ವೀರಶೈವ ಸಮಾಜಕ್ಕೆ ಸೇರಿದ ಅಧಿಕಾರಿಗಳನ್ನು ‘ಬಗ್ಗುಬಡಿಯುವ ಕುಯುಕ್ತಿ’ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಆಪಾದಿಸಿದ್ದಾರೆ.
ಮಹಾಸಭೆ ಯಶಸ್ವಿಯಾಗಿ ನಡೆಯುತ್ತಿರುವುದು ಅನೇಕ ಜನರ ಕಣ್ಣು ಕುಕ್ಕುತ್ತಿದೆ ಎಂದು ಹೇಳಿ, ಮಹಾಧಿವೇಶನ ಮುಗಿಯುವುದರೊಳಗೆ ಇದು ಜಾತಿ ಸಮ್ಮೇಳನ ಅಲ್ಲ ಎಂದು ಸ್ಪಷ್ಟಪಡಿಸಿ, ಸಮ್ಮೇಳನದ ಉದ್ದೇಶಗಳನ್ನು ತಿಳಿಸಬೇಕೆಂದು ಸಲಹೆ ಮಾಡಿದರು.
ಮೊದಲಾಗಿ ಭಾರತೀಯ, ಎರಡನೇಯದಾಗಿ ಕನ್ನಡಿಗ, ಮೂರನೇಯದಾಗಿ ಲಿಂಗಾಯಿತ ಎಂಬ ಭಾವನೆ ಯುವಕರಲ್ಲಿರಬೇಕು. ಇಂದಿನ ಕಲುಷಿತ ವಾತಾವರಣದಲ್ಲಿ ಈ ಮಾತನ್ನು ಹೇಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಮನೆಯೂ ಕೈಗಾರಿಕಾ ಕೇಂದ್ರವಾಗಿರುವ ಪಂಜಾಬಿನ ಸಿಕ್ಕರ ಉದ್ಯಮಶೀಲವನ್ನು ಪ್ರಸ್ತಾಪಿಸಿ, ಬಡತನ ನಿವಾರಣೆಗೆ ತಮ್ಮ ಪಾತ್ರ ಏನು ಅಂತ ಯೋಚಿಸಿ ಯುವಕರು ಕೆಲಸ ಮಾಡಬೇಕು ಎಂದರು.
ಕಳೆದ 15 ವರ್ಷಗಳಲ್ಲಿ ನಿಜಲಿಂಗಪ್ಪ, ಜತ್ತಿ ಮತ್ತು ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ‘ನಮ್ಮ ಸಮಾಜದವರಿಂದ ಒಂದು ಭಾರಿ ಕೈಕಾರಿಕೆ ಸ್ಥಾಪನೆ ಆಗಲಿಲ್ಲ. ಒಂದು ಪತ್ರಿಕೆ ಬರಲಿಲ್ಲ. ಪಿತ್ರಾರ್ಜಿತ ಆಸ್ತಿ ನಂಬಿ, ಉಪಜೀವನ ನಡೆಸುವ ಭಾವನೆಯನ್ನು ಬಿಟ್ಟು ಯುವಕರು ಉದ್ಯಮಶೀಲರಾಗಬೇಕು’ ಎಂದು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.