ADVERTISEMENT

50 ವರ್ಷಗಳ ಹಿಂದೆ| ಬುಧವಾರ, ಸೆಪ್ಟೆಂಬರ್‌ 06, 1972

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 19:30 IST
Last Updated 5 ಸೆಪ್ಟೆಂಬರ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಇಸ್ರೇಲಿ ಆಟಗಾರರ ಶಿಬಿರಕ್ಕೆ ಅರಬ್‌ ಗೆರಿಲ್ಲಾ ಮುತ್ತಿಗೆ; ಒಬ್ಬನ ಕೊಲೆ

ಮ್ಯೂನಿಕ್‌, ಸೆ. 5– ಸಬ್‌ಮೆಷಿನ್‌ಗನ್‌ ಮತ್ತು ಸ್ಫೋಟಕ ವಸ್ತುಗಳಿಂದ ಸಜ್ಜಾಗಿದ್ದ ಅರಬ್‌ ಕಮಾಂಡೋಗಳು ಇಂದು ಹಠಾತ್ತನೆ ಒಲಿಂಪಿಕ್‌ ಗ್ರಾಮದಲ್ಲಿನ ಇಸ್ರೇಲಿಗಳ ಬಿಡಾರಕ್ಕೆ ನುಗ್ಗಿ ಒಬ್ಬ ಇಸ್ರೇಲಿಯನ್ನು ಕೊಂದು ಇನ್ನೊಬ್ಬನಿಗೆ ಗಾಯ ಮಾಡಿ, ಹದಿಮೂರು ಮಂದಿ ಇಸ್ರೇಲಿ ಕ್ರೀಡಾಪಟುಗಳ ಪ್ರಾಣವನ್ನು ಪಣಕ್ಕೆ ಒಡ್ಡಿದ್ದರು.

ಇಸ್ರೇಲ್‌ ಬಂಧನದಲ್ಲಿಟ್ಟಿರುವ ಇನ್ನೂರು ಮಂದಿ ಅರಬ್‌ ಗೆರಿಲ್ಲಾಗಳನ್ನು ಬಿಡುಗಡೆ ಮಾಡಬೇಕೆಂದು, ಇಲ್ಲವಾದಲ್ಲಿ ಉಳಿದ ಇಸ್ರೇಲಿಗಳನ್ನು ಕೊಲ್ಲುವುದಾಗಿ ಅರಬ್‌ ಕಮಾಂಡೋಗಳು ಬೆದರಿಕೆ ಹಾಕಿದ್ದರು.

ADVERTISEMENT

ಒಲಿಂಪಿಕ್ಸ್‌ ತಾತ್ಕಾಲಿಕ ಸಸ್ಪೆನ್ಷನ್‌

ಮ್ಯೂನಿಕ್‌, ಸೆ. 5 – ಒಲಿಂಪಿಕ್‌ ಪಂದ್ಯಗಳನ್ನು 24 ಗಂಟೆಗಳ ಕಾಲ ಸಸ್ಪೆಂಡ್‌ ಮಾಡಲಾಗಿದೆ ಎಂದು ಒಲಿಂಪಿಕ್‌ ಅಂತರರಾಷ್ಟ್ರೀಯ ಸಮಿತಿಯ ನಿವೃತ್ತಿ ಹೊಂದಲಿರುವ ಅಧ್ಯಕ್ಷ ಅವೆರಿ ಬ್ರುಂಡೇಜ್‌ ಅವರು ತಿಳಿಸಿದರು.

ಒಲಿಂಪಿಕ್ಸ್‌ನಿಂದ ಈಜಿಪ್ಟ್‌ ವಾಪಸು

ಮ್ಯೂನಿಕ್‌, ಸೆ. 5 – ಅರಬ್‌ ಗೆರಿಲ್ಲಾಗಳು ಇಸ್ರೇಲ್‌ ಆಟಗಾರರ ಮೇಲೆ ಹಲ್ಲೆ ನಡೆಸಿರುವ ಕಾರಣ ಒಲಿಂಪಿಕ್‌ ಪಂದ್ಯಗಳಿಂದ ಈಜಿಪ್ಟ್‌ ವಾಪಸಾಗಿದ್ದು, ತನ್ನ ಟೀಮು ಇಂದು ಕೈರೋಗೆ ವಾಪಸ್‌ ಸಾಗಲಿದೆಯೆಂದು ಈಜಿಪ್ಟ್ ತಂಡದ ಅಧಿಕಾರಿಯೊಬ್ಬರು ಇಲ್ಲಿ ಇಂದು ಪ್ರಕಟಿಸಿದರು.

ಮಂಗಳೂರು ಗೊಬ್ಬರ ಕಾರ್ಖಾನೆ: 74ರಲ್ಲಿ ಉತ್ಪಾದನೆ ಆರಂಭ

ಮಂಗಳೂರು, ಸೆ. 5 – 58 ಕೋಟಿ ರೂ. ವೆಚ್ಚದ ಮಂಗಳೂರು ರಾಸಾಯನಿಕ ಗೊಬ್ಬರ ಕಾರ್ಖಾನೆಗಾಗಿ ಈಗಾಗಲೇ 13 ಕೋಟಿ ರೂ. ಮೌಲ್ಯದ ಯಂತ್ರಗಳನ್ನು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆಯೆಂದು ಕಂಪನಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀ ಎನ್‌.ಆರ್‌.ಶೇಷಾದ್ರಿ ಅವರು ಇಂದು ಹೇಳಿದರು.

ಮಂಗಳೂರಿನ ಕೃಷಿಕರು ಮತ್ತು ಕೈಗಾರಿಕೋದ್ಯಮಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 1974ರ ಮೇ ತಿಂಗಳೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಭರವಸೆ ನೀಡಿದರು.

ಕ್ರಿಮಿನಲ್‌ ಕೇಸ್‌ ನಿರ್ವಹಣೆ ಪ್ರಾಸಿಕ್ಯೂಷನ್ ಡೈರೆಕ್ಟೊರೇಟ್‌

ಬೆಂಗಳೂರು, ಸೆ. 5 –ಕ್ರಿಮಿನಲ್‌ ಕೇಸುಗಳ ನಿರ್ವಹಣೆಯಲ್ಲಿ ಹೆಚ್ಚಿನ ದಕ್ಷತೆ ತರಲು ರಾಜ್ಯದಲ್ಲಿ ಪ್ರತ್ಯೇಕ ಪ್ರಾಸಿಕ್ಯೂಷನ್ ಡೈರೆಕ್ಟೊರೇಟ್‌ ಒಂದನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ.

ಕಲಬುರ್ಗಿ ಗ್ರಾಮದಲ್ಲಿ ಎತ್ತು ಹಾಯ್ದು ಸಚಿವ ಕಿತ್ತೂರ್‌ ಅವರಿಗೆ ಗಾಯ

ಬೆಂಗಳೂರು, ಸೆ. 5 –ಬರಗಾಲ ಪರಿಹಾರ ಕಾಮಗಾರಿಗಳ ಬಗ್ಗೆ ಕ್ರಮ ಕೈಗೊಳ್ಳಲು ಕಲಬುರ್ಗಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ರಾಜ್ಯದ ಗೃಹ ಇಲಾಖೆಯ ರಾಜ್ಯ ಸಚಿವಅರ್‌.ಡಿ.ಕಿತ್ತೂರ್‌ ಅವರನ್ನು ಎತ್ತೊಂದು ಹಾಯ್ದು ಗಾಯಗೊಳಿಸಿತು.

ಪರಿಣಾಮವಾಗಿ ಸಚಿವರು ಕೆಳಗೆ ಬಿದ್ದರು. ಅವರಿಗೆ ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಎದೆಗೆ ಗಾಯಗಳಾಗಿದ್ದು, ಹೆಚ್ಚಿನ ತೊಂದರೆ ಇಲ್ಲವೆಂದು ಅಧಿಕೃತ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.