ADVERTISEMENT

25 ವರ್ಷಗಳ ಹಿಂದೆ | ಮಿಡಿದ ಮಂಡ್ಯ ರೈತರ ಅಂತಃಕರಣ

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಮಿಡಿದ ಮಂಡ್ಯ ರೈತರ ಅಂತಃಕರಣ

ಮಂಡ್ಯ, ಮೇ 28– ಕೆಆರ್‌ಎಸ್‌ನಿಂದ ಮೈಸೂರು ನಗರಕ್ಕೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿಗೆ ಈ ತಿಂಗಳ 16ರಿಂದ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲೆಯ ಪಾಲಹಳ್ಳಿ ಮತ್ತು ಸುತ್ತಲಿನ ರೈತರು ಹಿಂಪಡೆಯುವ ಮೂಲಕ ಎರಡೂ ಜಿಲ್ಲೆಗಳ ನಡುವಿನ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ.

ಜಿಲ್ಲೆಯ ಬೆಳೆಗಳಿಗೆ ನೀರು ಪೂರೈಸುವ ವಿ.ಸಿ. (ವಿಶ್ವೇಶ್ವರಯ್ಯ) ನಾಲೆ, ಆರ್‌ಬಿಎಲ್‌ಎಲ್‌ (ಬಲದಂಡೆ ಕೆಳಹಂತ) ನಾಲೆ, ಸಿಡಿಎಸ್‌ (ಚಿಕ್ಕದೇವರಾಯ) ನಾಲೆ, ದೇವರಾಯ ನಾಲೆಗಳಲ್ಲಿ ನೀರು ಬಾರದೆ ಬೆಳೆಗಳೆಲ್ಲ ಒಣಗಿಹೋಗುತ್ತಿರುವುದನ್ನು ಕಂಡ ರೈತರು ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮಾರ್ಗದ ತೂಬನ್ನು ದಿಢೀರೆಂದು ಬಂದ್‌ ಮಾಡಿದ್ದರು. ಇದರಿಂದಾಗಿ ಎರಡೂ ಜಿಲ್ಲೆಗಳ ಜನರ ನಡುವೆ ಎರಡು ವಾರಗಳಿಂದ ಭಿನ್ನಾಭಿಪ್ರಾಯ ಮೂಡಿ ವಿವಾದವೆದ್ದಿತ್ತು.

ಮೋಸದಾಟ: 30 ಸಾವಿ‌ರ ಕೋಟಿ ರೂ. ಕಪ್ಪುಹಣ

ನವದೆಹಲಿ, ಮೇ 28– ಕ್ರಿಕೆಟ್‌ ಮೋಸದಾಟಕ್ಕೆ ಸಂಬಂಧಿಸಿದಂತೆ ಸತ್ಯವನ್ನು ಬಯಲಿಗೆಳೆಯಲು ಸಿಬಿಐ ಒಂದರಿಂದಲೇ ಅಸಾಧ್ಯ ಎಂದೆನಿಸತೊಡಗಿರುವುದರಿಂದ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕೂಡಾ ತನಿಖೆ ನಡೆಸಲಿವೆ ಎಂದು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್‌ ವಿಶ್ವಬಂಧು ಗುಪ್ತಾ ಇಂದು ಇಲ್ಲಿ ಹೇಳಿದರು.

ADVERTISEMENT

‘ಈ ವ್ಯವಹಾರದಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಕಪ್ಪುಹಣ ತೊಡಗಿಸಲ್ಪಟ್ಟಿದೆ’ ಎಂದು ಅವರು ಹೇಳಿದ್ದು, ಸಜ್ಜನರ ಕ್ರೀಡೆಯ ಮತ್ತೊಂದು ಕರಾಳಮುಖದ ಪರಿಚಯ ಮಾಡಿಕೊಟ್ಟಿ
ದ್ದಾರೆ. ಆದರೆ 20 ವರ್ಷಗಳಿಂದ ಆದಾಯ ತೆರಿಗೆ ಇಲಾಖೆಯವರು ಒಬ್ಬನೇ ಒಬ್ಬ ಕ್ರಿಕೆಟಿಗನ ಮನೆಯ ಮೇಲೆ ದಾಳಿ ನಡೆಸದಿರುವುದು ಆಶ್ಚರ್ಯಕರವಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.