ADVERTISEMENT

25 ವರ್ಷಗಳ ಹಿಂದೆ: ನೆರೆ ರಾಜ್ಯಗಳ ಸಹಕಾರಕ್ಕೆ ಪಟೇಲ್‌ ಕರೆ‌

ಪ್ರಜಾವಾಣಿ ವಿಶೇಷ
Published 15 ಆಗಸ್ಟ್ 2022, 18:54 IST
Last Updated 15 ಆಗಸ್ಟ್ 2022, 18:54 IST
   

ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ; ಪ್ರಧಾನಿ ಗುಜ್ರಾಲ್‌ ಘೋಷಣೆ
ನವದೆಹಲಿ, ಆಗಸ್ಟ್‌ 15–
ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ, ರಾಜಕೀಯ ಮತ್ತು ಕ್ರಿಮಿನಲ್‌ಗಳ ನಡುವಣ ಅಪವಿತ್ರ ಮೈತ್ರಿ ವರ್ಜ್ಯಕ್ಕೆ ರಾಜಕೀಯ ಪಕ್ಷಗಳಿಗೆ ಪ್ರಧಾನಮಂತ್ರಿ ಇಂದರ್‌ ಕುಮಾರ್‌ ಗುಜ್ರಾಲ್‌ ಅವರು ಕರೆ ನೀಡಿದರು.

ಸ್ವಾತಂತ್ರ್ಯದ ಸುವರ್ಣ ಜಯಂತಿಯ ಅಂಗವಾಗಿ ಕಡುಬಡ ಕುಟುಂಬಗಳಲ್ಲಿ ಜನಿಸುವ ಹೆಣ್ಣು ಮಗುವಿಗೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೀಸಲಾತಿಗೆ ಮತ್ತೆ ಸರ್ಕಾರದ ಕಟಿಬದ್ಧತೆ, ಭೂರಹಿತ ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ಸ್ವಾತಂತ್ರ್ಯ ಯೋಧರಿಗೆ ನೀಡುತ್ತಿರುವ ವೇತನ ದುಪ್ಪಟ್ಟು ಮತ್ತು ಮುಂದಿನ ಸಂಸತ್‌ ಅಧಿವೇಶನದಲ್ಲಿ ಲೋಕಪಾಲ್‌ ಮಸೂದೆ ಮಂಡನೆ ಸೇರಿ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದರು.

ನೆರೆ ರಾಜ್ಯಗಳ ಸಹಕಾರಕ್ಕೆ ಪಟೇಲ್‌ ಕರೆ‌
ಬೆಂಗಳೂರು, ಆಗಸ್ಟ್‌ 15–
ನೆರೆ ಹೊರೆ ರಾಜ್ಯಗಳ ಸಹಕಾರ ಸೌಹಾರ್ದತೆಗೆ ಕರೆ ನೀಡಿದ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು, ರಾಜ್ಯದ ತಾಳ್ಮೆ ಮತ್ತು ನಿಲುವನ್ನು ಯಾರೂ ದೌರ್ಬಲ್ಯ ಎಂದು ಭಾವಿಸಬಾರದು ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನೆರೆ ಹೊರೆ ರಾಜ್ಯಗಳಲ್ಲಿ ಸೌಹಾರ್ದಯುತ ಬಾಂಧವ್ಯವನ್ನು ಕಾಪಾಡಿಕೊಂಡು ಬರುವುದು ಕರ್ನಾಟಕ ರಾಜ್ಯದ ಸಂಸ್ಕೃತಿ, ಪರಂಪರೆ. ವಿವಾದ ಹುಟ್ಟಿಸುವುದು, ನ್ಯಾಯಾಲಯಕ್ಕೆ ಹೋಗುವುದು ರಾಜ್ಯದ ಸ್ವಭಾವ ಅಲ್ಲ’ ಎಂದು ಹೇಳಿದರು.

ಒಂದೇ ಕುಟುಂಬದ ಐವರ ಕಗ್ಗೊಲೆ
ಬೆಳಗಾವಿ, ಆಗಸ್ಟ್‌ 15–
ಸವದತ್ತಿ ಬಳಿಯ ಯಡಹಳ್ಳಿ ಗ್ರಾಮದಲ್ಲಿ ಇಂದು ಬೆಳಗಿನ ಒಂದು ಗಂಟೆ ಸಮಯದಲ್ಲಿ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.

ಆಪಾದಿತರಾದ ವಿರೂಪಾಕ್ಷ ಹೂಗಾರ ಮತ್ತು ಅವರ ಬೆಂಬಲಿಗರಾದ 15ರಿಂದ 20 ಜನರು ಮಾರಕ ಅಸ್ತ್ರಗಳ ಜೊತೆಗೆ ಲಗಮಣ್ಣವರ ಕುಟುಂಬದ ಮೇಲೆ ಮಧ್ಯರಾತ್ರಿ ಎರಗಿ ಮಾರಣಹೋಮ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಮತ್ತೆ ಮದುವೆ ಇಲ್ಲ’
ಲಂಡನ್‌, ಆಗಸ್ಟ್‌ 15 (ಡಿಪಿಎ)–
ರಾಜಕುಮಾರ ಚಾರ್ಲ್ಸ್ ಅವರಿಂದ ಒಂದು ವರ್ಷದ ಹಿಂದೆ ವಿವಾಹ ವಿಚ್ಛೇದನ ಪಡೆದಿರುವ ರಾಜಕುಮಾರಿ ಡಯಾನಾ ಎರಡನೇ ವಿವಾಹಕ್ಕೆ ತಾನು ಆತುರಳಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋಟ್ಯಧಿಪತಿ ಪ್ಲೇಬಾಯ್‌ ದೋದಿ ಅಲಪೈಯ್ಡ್ ಅವರೊಂದಿಗಿರುವ ವಿವಾದಾತ್ಮಕ ಸಂಬಂಧದ ಹಿನ್ನೆಲೆಯಲ್ಲಿ ಅವರಿಬ್ಬರ ವಿವಾಹವಾಗಲಿದೆ ಎಂಬ ಸುದ್ದಿಗಳು ನಿನ್ನೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆದರೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಕೆ, ‘ಹಳೆ ವಿವಾಹ ಬಂಧನದಿಂದ ಹೊರಬಂದು ಹೊಸ ವಿವಾಹ ಮಾಡಿಕೊಳ್ಳಲು ಅಷ್ಟು ಸುದೀರ್ಘ ಕಾಲ ಹೋರಾಟ ನಡೆಸಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.