ವಾಚಕರ ವಾಣಿ
ಅನುದಾನಿತ ಶಾಲೆಗಳ ಉಪೇಕ್ಷೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳ ಜೊತೆಗೆ ನೋಟ್‌ಬುಕ್ ವಿತರಿಸುವ ಬಗ್ಗೆ ಪ್ರಸ್ತಾಪಿಸಿ ರುವುದು ಸ್ವಾಗತಾರ್ಹ. ಅನುದಾನಿತ ಶಾಲೆಗಳಲ್ಲಿನ ಬಡಮಕ್ಕಳಿಗೂ ಈ ಸೌಲಭ್ಯ ಕಲ್ಪಿಸಬೇಕಿದೆ. ಈಗಾಗಲೇ ಸಮವಸ್ತ್ರ, ಶೂ, ಪ್ರವಾಸ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗಿರುವ ಈ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಎಲ್ಲಾ ಸವಲತ್ತುಗಳಿಗೂ ಅರ್ಹರಿದ್ದಾರೆ. ಮಕ್ಕಳಿಗೆ ಕಲ್ಪಿಸುವ ಶೈಕ್ಷಣಿಕ ಸವಲತ್ತಿನಲ್ಲಿ ತಾರತಮ್ಯ ಮಾಡಬಾರದು.
– ಪ್ರಸಾದ್ ನಿಡಸಾಲೆ, ಕುಣಿಗಲ್
ಇವಿಎಂ ವಿರೋಧ: ರಾಟೆ ಇಲ್ಲ ಜಾಣ?
ರಾಜ್ಯದಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಿ ನಡೆದಿರುವ ಚುನಾವಣೆ ಗಳಲ್ಲಿ ವ್ಯತಿರಿಕ್ತ ಫಲಿತಾಂಶ ಬಂದಿಲ್ಲ. ರಾಜ್ಯದ ಮತದಾರರು ಇವಿಎಂ ಬಳಕೆಯಲ್ಲಿ ಸಮರ್ಥರಿದ್ದಾರೆ ಮತ್ತು ಅದರ ಬಗ್ಗೆ ಅಚಲ ವಿಶ್ವಾಸವಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಆರೋಪಿಸುವವರೆಗೂ ವಿರೋಧ ವ್ಯಕ್ತವಾಗಿಲ್ಲ. ಪಕ್ಕದ ಮನೆ ಸಾರಿನ ವಾಸನೆಗೆ ಮರುಳಾಗಿ ಹೆಂಡತಿ ಮಾಡಿದ ಅಡುಗೆ ಜರಿದಂತೆ ಜನರ ವಿಶ್ವಾಸಗಳಿಸಿರುವ ಇವಿಎಂ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.
– ಟಿ. ನಾರಾಯಣ ಗೌಡ, ಬೆಂಗಳೂರು
ಅಪಾರ್ ಐಡಿ ಗೊಂದಲ ನಿವಾರಿಸಿ
ಸಿಬಿಎಸ್‌ಇಯಿಂದ ಈ ಬಾರಿಯ ವಾರ್ಷಿಕ ಪರೀಕ್ಷೆ ನೋಂದಣಿಗೆ ‘ಅಪಾರ್ ಐಡಿ’ಯನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಸಿಬಿಎಸ್‌ಇ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಶೇ 40ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ. ಈ ಐಡಿ ರಚಿಸಲು ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣ ಪತ್ರ/ ಜನನ ಪ್ರಮಾಣ ಪತ್ರ ಹಾಗೂ ವಿದ್ಯಾರ್ಥಿಯ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿ ಹೊಂದಾಣಿಕೆಯಾಗಬೇಕು.
ದಾಖಲೆಗಳೆಲ್ಲವೂ ಹೊಂದಾಣಿಕೆಯಾದರೂ ಯುಡೈಸ್ ಪ್ಲಸ್‌ನಲ್ಲಿ ಈಗಾಗಲೇ ದಾಖಲಾಗಿರುವ ಮಗುವಿನ ಹೆಸರು ಬೇರೆ ಇದ್ದಲ್ಲಿ ಅಪಾರ್ ಐಡಿ ರಚಿಸಲು ಸಾಧ್ಯವಾಗುವುದಿಲ್ಲ. ಇನ್ನು ಯುಡೈಸ್ ಪ್ಲಸ್‌ನಲ್ಲಿ ಹೆಸರು ತಿದ್ದುಪಡಿಗೆ ಶಾಲೆ, ಬಿಇಒ ಕಚೇರಿಗೆ ಅನುಮತಿ ನೀಡಿಲ್ಲ. ತಿದ್ದುಪಡಿಯಾಗದ ಕಾರಣ ಅಪಾರ್ ಐಡಿ ರಚಿಸಲಾಗದೆ ಶಾಲೆಗಳು ತೊಂದರೆಗೆ ಸಿಲುಕಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತ್ವರಿತವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.
– ಸುರೇಂದ್ರ ಪೈ, ಭಟ್ಕಳ
ಸಿ.ಎಂ. ಮಾತುಗಳು ಸ್ಫೂರ್ತಿಯಾಗಲಿ
ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನನ್ನ ಒಡಹುಟ್ಟಿದವರು ಶಿಕ್ಷಣ ಪಡೆಯಲಿಲ್ಲ. ನಾನು ಶಾಲೆಗೆ ಹೋಗಿದ್ದರಿಂದ ಶಿಕ್ಷಣ ಪಡೆದೆ. ನೀವು ವಿದ್ಯೆ ಪಡೆಯಬೇಡಿ ಎಂದು ನನ್ನ ಒಡಹುಟ್ಟಿದವರ ಹಣೆಯ ಮೇಲೆ ದೇವರು ಬರೆದಿದ್ದಾನೆಯೇ? ಒಬ್ಬರಿಗೆ ವಿದ್ಯೆ, ಮತ್ತೊಬ್ಬರಿಗೆ ವಿದ್ಯೆ ಇಲ್ಲ ಎಂದು ಬರೆಯುವುದಾದರೆ ಅವನನ್ನು ದೇವರು ಎಂದು ಕರೆಯಬೇಕೇ?’ ಎಂದು ಪ್ರಶ್ನಿಸಿದರು.
ತರಗತಿಯಲ್ಲಿ ಅನುತ್ತೀರ್ಣಗೊಂಡರೆ ಇದು ನನ್ನ ಹಣೆಬರಹ ಎಂದು ಹೇಳುವವರು ಹೆಚ್ಚಿದ್ದಾರೆ. ವಿದ್ಯೆ ಯಾರೊಬ್ಬರ ಸ್ವತ್ತಲ್ಲ, ಎಲ್ಲರಿಗೂ ಸಾಮರ್ಥ್ಯ ಇರುತ್ತದೆ. ಅವಕಾಶ ಸಿಗಬೇಕಷ್ಟೆ, ಅಂತಹ ಅವಕಾಶವನ್ನು ಸಂವಿಧಾನ ಕೊಟ್ಟಿದೆ. ಸಿದ್ದರಾಮಯ್ಯ ಅವರ ಮಾತುಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಬೇಕು.
– ಐಶ್ವರ್ಯ ಚೆಲುವರಾಜು, ಪಾಂಡವಪುರ
ಧೂಮಪಾನ, ಮದ್ಯಪಾನದ ವೈಭವೀಕರಣ
ಇತ್ತೀಚೆಗೆ ಕೆಲವು ಕನ್ನಡ ಸಿನಿಮಾಗಳು ಯಶಸ್ವಿಯಾಗುತ್ತಿರುವುದು ಸಂತಸದ ವಿಚಾರ. ಆದರೆ, ಬಹುತೇಕ ಸಿನಿಮಾಗಳಲ್ಲಿ ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಹೆಚ್ಚಾಗಿರುವುದು ಸಮಾಜದ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರಲಿದೆ ಎಂಬ ಬಗ್ಗೆ ನಿರ್ದೇಶಕರಿಗೆ ಅರಿವು ಇದ್ದಂತಿಲ್ಲ. ಸಿನಿಮಾ ಆರಂಭಕ್ಕೂ ಮೊದಲು ಧೂಮಪಾನ ಹಾಗೂ ಮದ್ಯಪಾನದಿಂದ ಆಗುವ ಅನಾಹುತ ಕುರಿತಂತೆ ಚಿಕ್ಕದಾದ ವಿಡಿಯೊ ತುಣುಕುಗಳ ಮೂಲಕ ತೋರಿಸಲಾಗು ತ್ತದೆ. ಪ್ರೇಕ್ಷಕರು ಅದನ್ನು ನೋಡಿದರೂ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ಪ್ರಬಲವಾದ ಮಾಧ್ಯಮ. ಪ್ರೇಕ್ಷಕರು ಇಲ್ಲಿ ಎಲ್ಲವನ್ನೂ ಮನರಂಜನಾ ದೃಷ್ಟಿಯಿಂದ ನೋಡುತ್ತಾರೆ. ಸಿನಿಮಾ ನೋಡುತ್ತಾ ಅದರ ಜೊತೆಗೆ ನಾಯಕ ನಟರನ್ನು ಹಿಂಬಾಲಿಸುತ್ತಾರೆ. ಹಾಗಾಗಿ, ಸಮಾಜಕ್ಕೆ ಮಾರಕವಾಗುವ ದೃಶ್ಯಗಳನ್ನೇ ವೈಭವೀಕರಿಸುವುದು ಸರಿಯಲ್ಲ. ಯುವಜನರಿಗೆ ಮಾರ್ಗದರ್ಶನ ನೀಡುವಂತಹ ಸದಭಿರುಚಿ ಸಿನಿಮಾಗಳತ್ತ ನಿರ್ದೇಶಕರು ಚಿತ್ತ ಹರಿಸಬೇಕಿದೆ. ಇದು ಚಂದನವನದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
– ಹರವೆ ಸಂಗಣ್ಣ ಪ್ರಕಾಶ್, ಚಾಮರಾಜನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.