ADVERTISEMENT

ವಾಚಕರ ವಾಣಿ: ಸಂದರ್ಶನದ ಅಂಕ ಇಳಿಕೆ ಸ್ವಾಗತಾರ್ಹ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಫೆಬ್ರುವರಿ 2022, 19:30 IST
Last Updated 22 ಫೆಬ್ರುವರಿ 2022, 19:30 IST

ಕರ್ನಾಟಕ ಲೋಕಸೇವಾ ಆಯೋಗ ತನ್ನ ಅನೇಕ ಹಗರಣಗಳ ಮೂಲಕ ನಾಡಿನ ಜನರ ವಿಶ್ವಾಸವನ್ನೇ ಕಳೆದು ಕೊಂಡು ತನ್ನ ಘನತೆಯನ್ನು ಇಲ್ಲವಾಗಿಸಿಕೊಂಡ ಈ ಸಂದಿಗ್ಧ ಸಮಯದಲ್ಲಿ, ಸಂದರ್ಶನದ ಅಂಕಗಳನ್ನು ಸರ್ಕಾರವು 25ಕ್ಕೆ ಇಳಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ಶ್ಲಾಘನೀಯ!

ಈ ಮೊದಲು ಈ ವ್ಯಕ್ತಿತ್ವ ಪರೀಕ್ಷೆಗೆ 200 ಅಂಕ ಇತ್ತು. ಆ ಸಮಯದಲ್ಲಿ ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಅಭ್ಯರ್ಥಿ ಮೌಖಿಕ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಾದ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳಿಂದ ವಂಚಿತರಾಗುತ್ತಿದ್ದರು. ಅಲ್ಲದೆ ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಅಭ್ಯರ್ಥಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಗೆಜೆಟೆಡ್ ಹುದ್ದೆಗೆ ಏರುತ್ತಿದ್ದರು! ಆ ಸಮಯದಲ್ಲಿ ಪ್ರಭಾವ ಮತ್ತು ಹಣದ ಕಾಣದ ಕೈಗಳು ಕೆಲಸ ಮಾಡುತ್ತಿದ್ದವು. ಇದನ್ನು ಅನೇಕರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಬಳಿಕ 200 ಅಂಕಗಳ ಮೌಖಿಕ ಪರೀಕ್ಷೆಯನ್ನು 50 ಅಂಕಗಳಿಗೆ ಇಳಿಸಲಾಗಿತ್ತು. ಆ ಸಂದರ್ಭದಲ್ಲಿಯೂ ಹಣ ಹಾಗೂ ಪ್ರಭಾವ ಕೆಲಸ ಮಾಡುತ್ತಲೇ ಇದ್ದವು. ಆದರೆ ಮೊದಲಿಗಿಂತ ಹಾವಳಿ ಕಡಿಮೆಯಾಯಿತು. ಈಗ ಸರ್ಕಾರ ಈ ಅಂಕವನ್ನು ಇನ್ನಷ್ಟು ಇಳಿಸುವ ಮೂಲಕ ಪ್ರಭಾವ ಮತ್ತು ಹಣದ ಕೈಚಳಕಕ್ಕೆ ಹೆಚ್ಚಿನ ಕಡಿವಾಣ ಹಾಕಿದಂತಾಗಿದೆ.

ಮೌಖಿಕ ಪರೀಕ್ಷೆಯಲ್ಲಿ ಅಭ್ಯರ್ಥಿ ಪ್ರತಿಶತ 80 ಅಂಕಗಳಿಗಿಂತ ಹೆಚ್ಚು ಮತ್ತು ಪ್ರತಿಶತ 20 ಅಂಕಗಳಿಗಿಂತ ಕಡಿಮೆ ಅಂಕ ಗಳಿಸಿದಲ್ಲಿ ಸಂದರ್ಶನ ಮಂಡಳಿಯ ಸದಸ್ಯರು ಕಾರಣಗಳನ್ನು ದಾಖಲಿಸಬೇಕೆಂಬ ನಿಯಮ ತಂದಿರುವುದು ಸಹ ಮತ್ತೊಂದು ಪ್ರಶಂಸನೀಯ ಕಾರ್ಯ. ಆಯ್ಕೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರಬೇಕೆಂದರೆ ಪಿಎಸ್ಐ ಪರೀಕ್ಷೆಯಲ್ಲಿ ಹೊಸ ನಿಯಮ ತಂದಂತೆ ಮೌಖಿಕ ಪರೀಕ್ಷೆಯನ್ನೇ ಇಲ್ಲದಂತೆ ಮಾಡಬೇಕು.

ADVERTISEMENT

-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.