ADVERTISEMENT

ಶನಿವಾರ, 17–6–1995

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 19:30 IST
Last Updated 16 ಜೂನ್ 2020, 19:30 IST

ಒಂದು ದೇಶ ಒಂದು ಕಾಯ್ದೆ: ಚಿಂತನೆಗೆ ಎರಡು ಕವಲು

ಬೆಂಗಳೂರು, ಜೂನ್‌ 16– ನ್ಯಾಯವಾದಿಗಳು, ನ್ಯಾಯಮೂರ್ತಿ ಗಳು, ಕಾನೂನು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಂಥ ಗಣ್ಯರು ಭಾಗವಹಿಸಿದ್ದ ವಿಚಾರ ಸಂಕಿರಣದಲ್ಲಿ, ದೇಶದ ಎಲ್ಲ ನಾಗರಿಕರಿಗೂ ಅನ್ವಯ ಆಗುವಂತೆ ಏಕರೂಪ ನಾಗರಿಕ ಸಂಹಿತೆ ರೂಪಿಸುವುದು ಅತ್ಯಗತ್ಯ ಎಂಬ ಅನಿಸಿಕೆ ಒಂದೆಡೆ ವ್ಯಕ್ತವಾದರೆ; ಮತ್ತೊಂದೆಡೆ, ಮೊದಲು ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂಬ ಸಲಹೆ ಮೂಡಿಬಂದಿತು.

ಏಕರೂಪ ನಾಗರಿಕ ಸಂಹಿತೆ ಜಾರಿ ಗೊಳಿಸಿದರೆ ಏನೋ ಎತ್ತೋ ಎಂಬ ಅಂಜಿಕೆ, ಅನುಮಾನ ನಿರಾಧಾರ. ಇದರಿಂದ ಯಾರಿಗೂ ಅನ್ಯಾಯ ಆಗದು ಎಂಬ ಭರವಸೆ; ಏಕಾಏಕಿ ಇದನ್ನು ಜಾರಿಗೊಳಿಸುವ ಬದಲು, ಮೊದಲು ಕರಡು ಮಸೂದೆ ರೂಪಿಸಿ ಚರ್ಚಿಸುವುದು ಒಳಿತೆಂಬ ಸೂಚನೆ; ಇದುವರೆಗೆ ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ಮಾಡದ ಸರ್ಕಾರದ ಅಸಡ್ಡೆಯ ಬಗ್ಗೆ ಆಕ್ರೋಶವೂ ವ್ಯಕ್ತವಾಯಿತು.

ADVERTISEMENT

ಕಾಂಗ್ರೆಸ್‌, ಜನತಾದಳ ಸಮ್ಮಿಶ್ರ ಸರ್ಕಾರ ಇಲ್ಲ: ಹೆಗಡೆ ಸಲಹೆ ತಿರಸ್ಕೃತ

ಬೆಂಗಳೂರು, ಜೂನ್‌ 16– ಲೋಕಸಭಾ ಚುನಾವಣೆಗೆ ಮುಂಚೆ ಕೇಂದ್ರದಲ್ಲಿ ಪ್ರಧಾನಿ ನರಸಿಂಹ ರಾವ್‌ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಬೇಕು ಎಂಬ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಲಹೆಯನ್ನು ಜನತಾದಳ ಸಾರಾಸಗಟಾಗಿ ತಿರಸ್ಕರಿಸಿದೆ.

ಅತ್ತಿಬೆಲೆಯಲ್ಲಿ ನಡೆಯುತ್ತಿರುವ ದಳದ ರಾಷ್ಟ್ರೀಯ ಅಧ್ಯಯನ ಶಿಬಿರದ ಪ್ರತಿನಿಧಿ ಸಭೆಯಲ್ಲಿ ಇದು ಚರ್ಚೆಗೆ ಬಂದಾಗ ‘ಹೆಗಡೆ ಮಾಡಿರುವ ಪ್ರಸ್ತಾಪ ಸ್ವೀಕಾರ ಯೋಗ್ಯವಲ್ಲದ ಸಲಹೆ’ ಎಂದು ತಳ್ಳಿಹಾಕಲಾಯಿತು ಎಂದು ಪಕ್ಷದ ವಕ್ತಾರ ಜೈಪಾಲ ರೆಡ್ಡಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಕ್ಷದಲ್ಲಿ ಯಾರೊಬ್ಬರೂ ಹೆಗಡೆ ಅವರನ್ನು ಬೆಂಬಲಿಸಲಿಲ್ಲ. ಅವರು ಈ ವಿಚಾರದಲ್ಲಿ ಅಕ್ಷರಶಃ ಏಕಾಂಗಿಯಾದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.