* ಪರಾಮರ್ಶೆ– ಅನಂತ್ ಸಮರ್ಥನೆ; ಕುರೂಪ ಯತ್ನ– ಕೃಷ್ಣ ಆಕ್ರೋಶ
ಬೆಂಗಳೂರು, ಏ. 15– ಸಂವಿಧಾನ ಪರಾಮರ್ಶೆಯ ವಿಚಾರದಲ್ಲಿ ಕೇಂದ್ರದ ಸಂಸ್ಕೃತಿ ಸಚಿವ ಅನಂತ ಕುಮಾರ್ ಮತ್ತು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಡುವೆ ಇಂದು ಇಲ್ಲಿ ಒಂದೇ ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಗಂಭಿರ ಭಿನ್ನಾಭಿಪ್ರಾಯ ಬಹಿರಂಗಕ್ಕೆ ಬಂತು.
ಡಾ. ಬಿ.ಆರ್. ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಅಂಬೇಡ್ಕರ್ ಜಯಂತಿ ದಿನವಾದ ಇಂದು ಅವರ ಭಾವಚಿತ್ರವನ್ನು ಅನಾವರಣ ಮಾಡಿದ ಅನಂತ ಕುಮಾರ್ ಅವರು ಸಂವಿಧಾನ ಪರಾಮರ್ಶೆಯನ್ನು ಪರೋಕ್ಷವಾಗಿ ಸಮರ್ಥಿಸಿದರು.
ಸಂವಿಧಾನಕ್ಕೆ ಈಗಾಗಲೇ 79 ತಿದ್ದುಪಡಿಗಳನ್ನು ತರಲಾಗಿದೆ. ಇವುಗಳಲ್ಲಿ ಬಹುತೇಕ ತಿದ್ದುಪಡಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮಾಡಲಾಗಿದೆ. ರಾಜೀವ್ ಗಾಂಧಿ ಅವರು ಗ್ರಾಮೀಣಾಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರದಿದ್ದರೆ ಈಗಿನ ಅಧಿಕಾರ ವಿಕೇಂದ್ರೀಕರಣವೇ ಸಾಧ್ಯವಾಗುತ್ತಿರಲಿಲ್ಲ ಎಂದು ಅನಂತಕುಮಾರ್ ಪ್ರತಿಪಾದಿಸಿದರು.
ಕರ್ತವ್ಯ: ಆದರೆ ನಂತರ ಮಾತನಾಡಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಈ ವಾದವನ್ನು ಒಪ್ಪದೇ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜೋಪಾನವಾಗಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಅದನ್ನು ಸುಂದರ ಮಾಡುತ್ತೇವೆ ಎನ್ನುತ್ತಾ ಮತ್ತಷ್ಟು ಕುರೂಪ ಮಾಡುವುದಕ್ಕೆ ಯಾರೂ ಕೈ ಹಾಕಬಾರದು ಎಂದು ಮಾತಿನ ತಿರುಗುಬಾಣ ಬಿಟ್ಟರು.
–––
* ಮಹಾಭಾರತದಿಂದ ಕ್ರಿಕೆಟ್‌ವರೆಗೆ ಬಾಜಿ
ಮುಂಬೈ, ಏ. 14 (ಪಿಟಿಐ)– ಬಾಜಿ ನಿನ್ನೆ ಮೊನ್ನೆಯ ಚಾಳಿಯಲ್ಲ, ಮಹಾಭಾರತದಲ್ಲಿಯೂ ರಾಜರು ಬಾಜಿ ಕಟ್ಟಿಯೇ ಅರಸೊತ್ತಿಗೆಯನ್ನು ಕಳೆದುಕೊಂಡಿದ್ದರು. ಆಗ ಪಗಡೆಯಿದ್ದರೆ ಈಗ ಅದರ ಸ್ಥಾನದಲ್ಲಿ ಕ್ರಿಕೆಟ್ ಇದೆ. ಅಷ್ಟೇ ವ್ಯತ್ಯಾಸ.
ಕ್ರಿಕೆಟ್‌ನ ಏರಿಳಿತಗಳಿಗೆ ಮುಂಬೈ ಮೂಕಸಾಕ್ಷಿಯಾಗಿ ನಿಂತಿದೆ. ಬಾಜಿಗೆ ಮೂಲ ಬುಕ್ಕಿಗಳು, ಬುಕ್ಕಿಗಳಿಗೆ ಮೂಲ ಈ ಮುಂಬೈ. ಕೊಳೆಗೇರಿ, ಮಧ್ಯಮ ವರ್ಗ ಜನರ ಭರಾಟೆ, ಗಿಜಿಗಿಡುವ ಮುಂಬೈ ರಸ್ತೆಗಳ ನಡುವೆ ಬಾಜಿ ಸದ್ದಿಲ್ಲದೆ ನಡೆಯುತ್ತಿದೆ.
ಮುಂಬೈಯಲ್ಲಿ ಮಟ್ಕಾ ಬಿಟ್ಟರೆ ಕ್ರಿಕೆಟ್ ಬಾಜಿ ಬಹಳ ಜನಪ್ರಿಯವಾದ ಜೂಜು. ಕ್ರಿಕೆಟ್ ಜನಪ್ರಿಯತೆಯಿಂದಾಗಿ ಲಕ್ಷಾಂತರ ಹಣ ಜೂಜುಕೋರರ ಕೈಗಳಿಂದ ಕೈಗಳಿಗೆ ದಾಟುತ್ತದೆ.
ಕ್ರಿಕೆಟ್‌ನಲ್ಲಿ ಜೂಜು ಬಹಳ ರೀತಿಯಲ್ಲಿದೆ. ಒಂದು ತಂಡ ಎಷ್ಟು ರನ್‌ಗಳಿಸಬಹುದು, ಬೌಲರ್ ಎಷ್ಟು ವಿಕೆಟ್ ಪಡೆಯಬಹುದು, ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್, ಪಂದ್ಯದ ಪುರುಷೋತ್ತಮ... ಹೀಗೆ ಬಗೆಗಳು ಹೆಚ್ಚುತ್ತಾ ಹೋಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.