ADVERTISEMENT

ಶುಕ್ರವಾರ, 1–8–1969

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 20:00 IST
Last Updated 31 ಜುಲೈ 2019, 20:00 IST
   

ಪಶ್ಚಿಮ ಬಂಗಾಳ ವಿಧಾನಸಭೆಗೆ ಪೊಲೀಸರ ಲಗ್ಗೆ

ಕಲ್ಕತ್ತ, ಜುಲೈ 31– ಐದು ಸಾವಿರಕ್ಕೂ ಹೆಚ್ಚು ಮಂದಿ ಇದ್ದರೆಂದು ಅಂದಾಜು ಮಾಡಲಾದ ಉದ್ರಿಕ್ತ ಸಮವಸ್ತ್ರಧಾರಿ ಪೊಲೀಸರು ಇಂದು ಪಶ್ಚಿಮ ಬಂಗಾಳ ವಿಧಾನಸಭೆಗೆ ಲಗ್ಗೆ ಹಾಕಿ ಕುರ್ಚಿ, ಧ್ವನಿವರ್ಧಕ ಮತ್ತು ಗಾಜಿನ ಕಿಟಕಿಗಳನ್ನು ಮುರಿದರಲ್ಲದೆ ಸದಸ್ಯರನ್ನು ಥಳಿಸಿದರು.

ಪೊಲೀಸರು ಎದುರಿಗೆ ಸಿಕ್ಕಿದ್ದನ್ನು ಧ್ವಂಸ ಮಾಡಿದರು. ಅಡ್ಡಬಂದವರನ್ನು ಹೊಡೆದರು. ನಂತರ ಪೊಲೀಸ್‌ ಸಚಿವ ಹಾಗೂ ಉಪಮುಖ್ಯಮಂತ್ರಿ ಜ್ಯೋತಿಬಸು ಅವರ ಕೋಣೆಯತ್ತ ಸಾಗಿದರು.

ADVERTISEMENT

ಇಪ್ಪತ್ತನಾಲ್ಕು ಪರಗಣ ಜಿಲ್ಲೆಯ ಬಸಂತಿ ಪ್ರದೇಶದಲ್ಲಿ, ಅಧಿಕಾರಾರೂಢ ಸಂಯುಕ್ತ ರಂಗದ ಅಂಗಪಕ್ಷವಾದ ಸೋಷಲಿಸ್ಟ್ ಯೂನಿಟಿ ಸೆಂಟರ್‌ನ ಕಾರ್ಯಕರ್ತರ ನಡುವೆ ಬುಧವಾರ ನಡೆದ ಘರ್ಷಣೆಯಲ್ಲಿ ತಮ್ಮ ಸಹೋದ್ಯೋಗಿಯೊಬ್ಬರನ್ನು ರಾಜಕೀಯ ಕಾರ್ಯಕರ್ತರು ಗುಂಡಿಟ್ಟು ಕೊಂದ ಬಗೆಗೆ ಪ್ರತಿಭಟಿಸಲು ಪೊಲೀಸರು ಅಸೆಂಬ್ಲಿಯವರೆಗೆ ಮೆರವಣಿಗೆಯಲ್ಲಿ ಧಾವಿಸಿ ಬಂದರು. ಪೊಲೀಸರು ಸತ್ತ ತಮ್ಮ ಸಹೋದ್ಯೋಗಿಯ ಶವವನ್ನೂ ಮೆರವಣಿಗೆಯಲ್ಲಿ ತಂದಿದ್ದರು. ಗೊಂದಲದಲ್ಲಿ 22 ಮಂದಿ ಶಾಸಕರಿಗೆ ಗಾಯಗಳಾಗಿವೆ.

ಬಸು ಶಂಕೆ: ಪೊಲೀಸರ ಇಂದಿನ ವರ್ತನೆಯ ಹಿನ್ನೆಲೆಯಲ್ಲಿ ‘ಗಾಢವಾದ ಸಂಚು’ ಇರಬಹುದೆಂದು ತಾವು ಶಂಕಿಸುವುದಾಗಿ ಜ್ಯೋತಿಬಸು ತಿಳಿಸಿದರು.

ನಿಕ್ಸನ್‌ಗೆ ದೆಹಲಿ ಸ್ವಾಗತ

ನವದೆಹಲಿ, ಜುಲೈ 31– ಇಂದು ಮಧ್ಯಾಹ್ನ ಇಲ್ಲಿಗೆ ಆಗಮಿಸಿದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಶ್ರೀಮತಿ ನಿಕ್ಸನ್ ಅವರಿಗೆ ಹಂಗಾಮಿ ರಾಷ್ಟ್ರಪತಿ ಇದಾಯತ್ ಉಲ್ಲಾ, ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮತ್ತಿತರರು ವೈಭವದ ಸ್ವಾಗತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.