ADVERTISEMENT

ಅಂತ್ಯಗೊಂಡ ಅಸರಾನಿ ‘ಹಾಸ್ಯವಲ್ಲರಿ’: ಅಪರೂಪದ ನಟ ಇನ್ನು ನೆನಪು

ಚಟಾಕಿಗಳಿಗೆ ತಮ್ಮತನದ ‘ಟೈಮಿಂಗ್’ ನೀಡಿದ ಅಪರೂಪದ ನಟ ಇನ್ನು ನೆನಪು

ಏಜೆನ್ಸೀಸ್
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
   

ಮುಂಬೈ: ‘ಶೋಲೆ’ ಹಿಂದಿ ಸಿನಿಮಾದ ಜೈಲರ್ ಪಾತ್ರದಲ್ಲಿ ಸದಾ ನೆನಪಿನಲ್ಲಿ ಉಳಿದಿರುವ ಹಾಸ್ಯನಟ ಗೋವರ್ಧನ್ ಅಸರಾನಿ ಸೋಮವಾರ ನಿಧನರಾದರು. 84 ವರ್ಷ ವಯಸ್ಸಿನ ಅವರು ಐದು ದಿನಗಳ ಹಿಂದೆ ವಯೋಸಹಜ ದೈಹಿಕ ಸಮಸ್ಯೆಗಳ ಕಾರಣಕ್ಕೆ ಆಸ್ಪತ್ರೆಗೆ ಸೇರಿದ್ದರು. 

1940ರಲ್ಲಿ ಜೈಪುರದಲ್ಲಿ ಸಿಂಧಿ ಕುಟುಂಬದಲ್ಲಿ ಹುಟ್ಟಿದ ಗೋವರ್ಧನ್ ಅವರು ಅಸರಾನಿ ಎಂದೇ ಜನಪ್ರಿಯರಾಗಿದ್ದರು. ಅವರ ತಂದೆ ಕಾರ್ಪೆಟ್‌ಗಳನ್ನು ಮಾರುವ ಅಂಗಡಿ ಇಟ್ಟಿದ್ದರು. ಆ ವ್ಯವಹಾರದಲ್ಲಿ ಆಸಕ್ತಿ ತೋರಿಸದ ಅಸರಾನಿ ಅವರಿಗೆ ಅಭಿನಯದಲ್ಲಿ ಒಲವಿತ್ತು. ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಕಲಿತು, ರಾಜಸ್ಥಾನ ಕಾಲೇಜಿನಿಂದ ಪದವಿ ಮುಗಿಸಿದರು. ಆ ಹೊತ್ತಿಗಾಗಲೇ ಅವರು ಜೈಪುರ ಆಕಾಶವಾಣಿಯಲ್ಲಿ ಕಂಠದಾನ ಕಲಾವಿದರಾಗಿ ಪಳಗಿದ್ದರು. 

ಪುಣೆಯ ಫಿಲ್ಮ್‌ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಎಫ್‌ಟಿಐಐ)ನಲ್ಲಿ 1964ರಲ್ಲಿ ತರಬೇತಿ ಪಡೆದು ಹೊರಬಂದರಾದರೂ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಮೂರು ವರ್ಷಗಳ ನಂತರ; 1967ರಲ್ಲಿ ‘ಹರೇ ಕಾಂಚ್‌ ಕಿ ಚೂಡಿಯಾಂ’ ಸಿನಿಮಾದಲ್ಲಿ. ನಟ ಬಿಸ್ವಜೀತ್ ಸ್ನೇಹಿತನ ಪಾತ್ರದಲ್ಲಿ ಅವರು ಆ ಚಿತ್ರದಲ್ಲಿ ನಟಿಸಿದರು. ಅದೇ ಕಾಲಘಟ್ಟದಲ್ಲಿ ಕೆಲವು ಗುಜರಾತಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳೂ ಅವರನ್ನು ಹುಡುಕಿಕೊಂಡು ಬಂದವು. 

ADVERTISEMENT

ಹೃಷಿಕೇಶ್ ಮುಖರ್ಜಿ, ಗುಲ್ಜಾರ್ ಹಾಗೂ ಬಿ.ಆರ್. ಚೋಪ್ರಾ ತರಹದ ದಿಗ್ಗಜರ ಚಿತ್ರಗಳ ಮೂಲಕ ಅಭಿನಯದ ಛಾಪು ಮೂಡಿಸಿದ ಅಸರಾನಿ ಅವರು ಹಿಂದಿಯ ಮೊದಲ ಸೂಪರ್‌ ಸ್ಟಾರ್ ರಾಜೇಶ್ ಖನ್ನಾ ಆಪ್ತಸ್ನೇಹಿತರಾಗಿದ್ದರು. ಅವರೊಟ್ಟಿಗೆ ಸುಮಾರು 25 ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. 

ವೃತ್ತಿಬದುಕಿನ ಸಂಧ್ಯಾಕಾಲದಲ್ಲೂ ಅವರ ಎರಡನೇ ಇನಿಂಗ್ಸ್‌ ಶುರುವಾದದ್ದು ನಿರ್ದೇಶಕ ಪ್ರಿಯದರ್ಶನ್ ಹಾಸ್ಯಚಿತ್ರಗಳಿಂದ. ‘ಹೇರಾ ಫೇರಿ’, ‘ಆಮ್‌ದನಿ ಅಠನ್ನಿ ಖರ್ಚಾ ರುಪಯ್ಯಾ’, ‘ಬಾಗ್‌ಬನ್’, ‘ಚುಪ್ಕೆ ಚುಪ್ಕೆ’, ‘ಗರಮ್ ಮಸಾಲಾ’, ‘ಬೋಲ್‌ ಬಚ್ಚನ್’ ಇವೆಲ್ಲವೂ ಅವರ ಎರಡನೇ ಇನಿಂಗ್ಸ್‌ ನೆನಪಿಸುವ ಹಿಂದಿ ಚಿತ್ರಗಳು. 

ನಟಿ ಮಂಜು ಬನ್ಸಲ್ ಅವರನ್ನು ವಿವಾಹವಾಗಿದ್ದ ಅಸರಾನಿ ಅವರಿಗೆ ಮಗ ನವೀನ್ ಇದ್ದಾರೆ. 

ಫಿಲ್ಮ್‌ಫೇರ್‌ ಸೇರಿದಂತೆ ಕೆಲವು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಈ ನಟ ತಮ್ಮ ಹಾಸ್ಯವಲ್ಲರಿಯ ‘ಟೈಮಿಂಗ್‌’ನಿಂದಾಗಿಯೇ ಗುರುತಾಗಿದ್ದರು. ‘ಶೋಲೆ’ ಸಿನಿಮಾದ ಅತಿರೇಕಿ ಜೈಲರ್ ಪಾತ್ರದ ಮೂಲಕ ಅವರು ಸದಾ ಜೀವಂತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.