ADVERTISEMENT

‘ರಾಜ್ ಕಪೂರ್ ಪುರಾಣ’ದಗಟ್ಟಿ ಹೆಣ್ಣು

ವ್ಯಕ್ತಿ

ವಿಶಾಖ ಎನ್.
Published 6 ಅಕ್ಟೋಬರ್ 2018, 20:09 IST
Last Updated 6 ಅಕ್ಟೋಬರ್ 2018, 20:09 IST
Krishna
Krishna   

‘ರಾಜ್ ಕಪೂರ್ ಪುರಾಣ’ ಎನ್ನುವ ಈಡಿಯಂ ಒಂದು ಹಿಂದಿ ಸಿನಿಮಾರಂಗದಲ್ಲಿ ಇದೆ. ಆ ಪುರಾಣದಲ್ಲಿ ಸ್ತ್ರೀ ಪಾತ್ರಗಳೂ ಉಂಟು. ನರ್ಗೀಸ್, ಲತಾ ಮಂಗೇಷ್ಕರ್, ಸಿಮಿ ಗರೆವಾಲ್, ದೇವಯಾನಿ ಚೌಬಲ್… ಹೀಗೆ ಬಿಳಿ ಸೀರೆ ಉಟ್ಟ ಹೆಣ್ಣುಪಾತ್ರಗಳನ್ನು ‘ರಾಜ್ ಕಪೂರ್ ಪುರಾಣ’ ಎಂಬ ಈಡಿಯಂ ಒಳಗೊಳ್ಳುತ್ತದೆ. ಬಿಳಿ ಸೀರೆ ಎನ್ನುವುದು ರಾಜ್ ಕಪೂರ್ ಬದುಕಿನ ಸ್ತ್ರೀ ಪಾತ್ರಗಳ ಅಸ್ಮಿತೆಯ ಸಂಕೇತ. ಹಾಗೆ ರಾಜ್ ಕಪೂರ್ ಬದುಕಿನಲ್ಲಿ ಬಿಳಿ ಸೀರೆ ಉಟ್ಟೇ ಕಷ್ಟ- ಸುಖಗಳನ್ನು ಸೆರಗಿಗೆ ಕಟ್ಟಿಕೊಂಡು ತಿರುಗಿದ ಗಟ್ಟಿಗಿತ್ತಿಯಾಗಿ ಕೃಷ್ಣಾ ರಾಜ್ ಕಪೂರ್ ಆಪ್ತೇಷ್ಟರ ಮನದಲ್ಲಿ ಉಳಿದಿದ್ದಾರೆ.

ಕನ್ನಡದಲ್ಲಿ ರಾಜ್ ಕುಮಾರ್ ಸಿನಿಮಾ ಯಶಸ್ಸಿನ ಕುದುರೆಯ ಜೀನು ಹಿಡಿದು ಪಾರ್ವತಮ್ಮ ಗಟ್ಟಿಗಿತ್ತಿಯಾಗಿ ಮೆರೆದಿದ್ದರಲ್ಲ; ಕೃಷ್ಣಾ ಹಾಗೆ ಹಿಂದಿಯ ರಾಜ್ ಸಿನಿಮಾ ಕುದುರೆಯ ಲಗಾಮು ಹಿಡಿಯಲು ಆಗಲಿಲ್ಲ. ಆದರೆ, ಅವರು ಮನೆಯಲ್ಲಿ ಸಾಂಸಾರಿಕ ಸುಖ ಮರುಸ್ಥಾಪಿಸಲು ಅವಿರತ ಶ್ರಮಿಸಿದರು.

ಕೃಷ್ಣಾ ಕಲಾವಿದೆ. ಸಂಗೀತಗಾರ್ತಿ. ಅಪ್ಪ ರಾಯ್ ಸಾಹೇಬ್ ಕರ್ತಾರ್‌ನಾಥ್ ಮಲ್ಹೋತ್ರ ಕಲೋಪಾಸಕ. ಸೆಂಟ್ರಲ್ ಪ್ರಾವಿನ್ಸಸ್‌ನಲ್ಲಿ ಇನ್‌ಸ್ಪೆಕ್ಟರ್ ಜನರಲ್ ಆಗಿದ್ದವರು.

ADVERTISEMENT

ಪೃಥ್ವಿ ಥಿಯೇಟರ್ಸ್‌ ತಂಡದವರು ನಾಟಕಗಳನ್ನಾಡುತ್ತಾ ಊರೂರು ತಿರುಗುತ್ತಿದ್ದರು. ಹಾಗೆ ಒಮ್ಮೆ ರೇವಾಗೆ ತಂಡ ಹೋಗಿತ್ತು. ರೇವಾ ಈಗಿನ ಮಧ್ಯಪ್ರದೇಶದಲ್ಲಿರುವ ಸ್ಥಳ. ರಾಜ್ ಕಪೂರ್ ಕೂಡ ಅಲ್ಲಿದ್ದರು. ಮತ್ತೊಬ್ಬ ಸಿನಿಮಾಮೋಹಿ ಪ್ರೇಮ್‌ನಾಥ್ ಕೂಡ ಅದೇ ಊರಿನವರು. ಅವರು ತಮ್ಮ ಮನೆಗೆ ರಾಜ್ ಕಪೂರ್‌ ಅವರನ್ನು ಕರೆದುಕೊಂಡು ಹೋದರು. ಬಾಗಿಲ ಬಳಿ ಚಪ್ಪಲಿ ಬಿಟ್ಟು, ಒಳಗೆ ಅಡಿ ಇಟ್ಟ ರಾಜ್ ಕಪೂರ್ ಕಿವಿ ಮೇಲೆ ಸಿತಾರ್ ನಾದದಲೆ ಬಡಿಯಿತು. ಅದು ಬಂದ ದಿಕ್ಕಿನಲ್ಲೇ ರಾಜ್ ಕಪೂರ್ ಸಾಗಿದರು. ನುಡಿಸಾಣೆ ಹಿಡಿಯುತ್ತಿದ್ದ ಸುಂದರ ಷೋಡಶಿಯ ಪಕ್ಕ ಕೂತರು. ಎದುರಲ್ಲಿದ್ದ ತಬಲ ನುಡಿಸತೊಡಗಿದರು. ಸಿತಾರ್ ವಾದನಕ್ಕೆ ತಬಲಾ ಸಾಥ್. ಆ ಸಿತಾರ್ ನುಡಿಸುತ್ತಿದ್ದ ಹುಡುಗಿಯೇ ಕೃಷ್ಣಾ; ಪ್ರೇಮ್‌ನಾಥ್ ತಂಗಿ. ಹದಿನಾರರ ಸುಂದರಿಯನ್ನು ಕಂಡು ಇಪ್ಪತ್ತೆರಡರ ರಾಜ್ ಕಪೂರ್ ಮೊದಲ ನೋಟಕ್ಕೇ ಪ್ರೇಮಿಯಾಗಿಬಿಟ್ಟರು. ಕಪೂರ್ ಹಾಗೂ ಮಲ್ಹೋತ್ರ ಕುಟುಂಬಗಳೆರಡೂ ಪ್ರತಿಷ್ಠಿತವೇನೋ ಹೌದು. ಆದರೆ, ಎರಡೂ ಮನೆತನಗಳ ನಡುವೆ ಮದುವೆ ಸಲೀಸೇನೂ ಆಗಿರಲಿಲ್ಲ. ರಾಜ್ ಕಪೂರ್ ಹಾಗೂ ಕೃಷ್ಣಾ ಇಬ್ಬರೂ ಪಟ್ಟುಹಿಡಿದು ಮದುವೆಯಾದರು. ಹಿಂದಿ ಚಿತ್ರರಂಗ ಕಳೆಗಟ್ಟುವ ಹಂತದಲ್ಲಿದ್ದ ಸ್ಥಿತಿಯಲ್ಲೇ ಹೀಗೊಂದು ಸಿನಿಮೀಯ ವಿವಾಹ ನಡೆದುಹೋಯಿತು.

ರಿಷಿ ಕಪೂರ್, ರಣಧೀರ್ ಕಪೂರ್, ರಾಜೀವ್ ಕಪೂರ್, ರೀತು ನಂದಾ, ರೀಮಾ ಕಪೂರ್- ಹೀಗೆ ಐವರು ಮಕ್ಕಳು ಹುಟ್ಟಿದರು. ಚೆಂಬೂರಿನ ಬಾಡಿಗೆ ಮನೆಯಲ್ಲಿ ಗಂಡನ ಸಿನಿಮಾ ಕನಸುಗಳಿಗೆ ನೀರೆರೆಯುತ್ತಾ, ಮಕ್ಕಳ ಲಾಲನೆ- ಪಾಲನೆಯಲ್ಲಿ ಕೃಷ್ಣಾ ನಿರತರಾದರು. ಓದಿನಲ್ಲಿ ಮಕ್ಕಳು ಅಷ್ಟಕ್ಕಷ್ಟೇ ಎನ್ನುವಂತೆ ಇದ್ದರೂ ದಕ್ಷಿಣ ಮುಂಬೈನ ಸಂಪರ್ಕಕ್ಕೆ ಬಂದು, ನಾಜೂಕಾಗಲಿ ಎಂದು ದೂರದ ಶಾಲೆಗೆ ಕಳುಹಿಸುತ್ತಿದ್ದರು.

ಕೃಷ್ಣಾ ತಮ್ಮ ತವರು ಮನೆಯಲ್ಲಿ ಅಡುಗೆ ಮಾಡಿದವರೇ ಅಲ್ಲ. ಮೊಟ್ಟೆ ಒಡೆದದ್ದೂ ಅವರಿಗೆ ನೆನಪಿರಲಿಲ್ಲ. ರಾಜ್ ಕಪೂರ್ ಮಡದಿಯಾದ ಮೇಲೆ ಮನೆಯ ತಿಜೋರಿ, ತಲೆಬಾಗಿಲಿನ ಕೀಲಿಗಳ ಜತೆಗೆ ಅಡುಗೆ ಮನೆಯ ಉಸ್ತುವಾರಿಯನ್ನೂ ಅವರು ಪ್ರೀತಿಸತೊಡಗಿದರು. ಸಿನಿಮಾ ಮಂದಿಯನ್ನು ಸೇರಿಸಿ ರಾಜ್ ಕಪೂರ್ ಪಾರ್ಟಿ ಆಯೋಜಿಸಿದರೆಂದರೆ, ‘ಮೆನು’ ಕುರಿತು ಆಮೇಲೆ ದಿನಗಟ್ಟಲೆ ಚರ್ಚೆಗಳು ನಡೆಯುತ್ತಿದ್ದವು. ಕೃಷ್ಣಾ ಉಸ್ತುವಾರಿಯಲ್ಲಿ ತಯಾರಾದ ಯಾಖ್ನಿ ಪುಲಾವ್, ಜಂಗ್ಲಿ ಮಟನ್ ಹಾಗೂ ಪಾಯಾ ಎಂದರೆ ಹಿಂದಿ ಚಿತ್ರರಂಗದ ಗಣ್ಯಾತಿಗಣ್ಯರ ಬಾಯಿಯಲ್ಲೂ ನೀರೂರುತ್ತಿತ್ತು. ಅವುಗಳು ತಯಾರಾಗುವಾಗ ರುಚಿ ತುಸುವೂ ಹದತಪ್ಪದಂತೆ ನಿಗಾ ಮಾಡುತ್ತಿದ್ದವರೇ ಕೃಷ್ಣಾ. ಅಡುಗೆಯವರು ಅವರ ಇಶಾರೆಗಳಿಗೆ ಮಣಿಯದೆ ವಿಧಿಯಿರಲಿಲ್ಲ.

ಕೃಷ್ಣಾ ಮದುವೆಯಾಗುವ ಮೊದಲು ಇಷ್ಟಪಡುತ್ತಿದ್ದ ನಟ ಅಶೋಕ್ ಕುಮಾರ್. ರಾಜ್ ಕಪೂರ್ ಮದುವೆಗೆ ಸಾಕ್ಷಿಯಾದವರ ಸಾಲಿನಲ್ಲಿ ಆ ಮಹಾನ್ ನಟ ಕೂಡ ಇದ್ದುದು ಕೃಷ್ಣಾ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಪತ್ನಿ ಸಿನಿಮಾ ನಟರನ್ನು ಅಷ್ಟು ಇಷ್ಟಪಡುವುದನ್ನು ಕಂಡ ರಾಜ್ ಕಪೂರ್ ಅದರಿಂದ ಸ್ಫೂರ್ತಿ ಪಡೆದೇ ಅಭಿನಯಮೋಹವನ್ನು ಇನ್ನಷ್ಟು ಉಜ್ಜಿದರು. ನಟ, ನಿರ್ದೇಶಕ, ನಿರ್ಮಾಪಕನಾಗಿ ತನ್ನದೇ ಸಾಮ್ರಾಜ್ಯ ಕಟ್ಟಿದ ರಾಜ್ ಕಪೂರ್, ಎಷ್ಟೋ ಸಲ ಪತ್ನಿಯನ್ನು ಬಾಯಿತುಂಬಾ ಹೊಗಳಿದ್ದಿದೆ. ‘ನನಗೆ ಅಂಬಾಸಿಡರ್ ಕಾರು ಸಾಕು, ಮರ್ಸಿಡೀಸ್ ನನ್ನ ಹೆಂಡತಿಗೆ’ ಎಂದು ಅವರು ಹೇಳಿದ್ದ ಗಳಿಗೆಯಲ್ಲಿ ಕೃಷ್ಣಾ ಕೆನ್ನೆ ಕೆಂಪಾಗಿತ್ತು.

ಐಹಿಕ ಸುಖವನ್ನು ಇಷ್ಟಪಡುತ್ತಿದ್ದ ಕೃಷ್ಣಾ, ಹಾಸ್ಯಚಟಾಕಿ ಹಾರಿಸುವುದರಲ್ಲೂ ನಿಸ್ಸೀಮರಾಗಿದ್ದರಂತೆ. ದೊಡ್ಡ ದೊಡ್ಡ ಮದುವೆಗಳಿಗೆ ಹೋದಾಗ, ಸರತಿ ಸಾಲಿನಲ್ಲಿ ನಿಂತವರು ವಿಪರೀತ ಅಲಂಕಾರ ಮಾಡಿಕೊಂಡಿದ್ದನ್ನು ಕಂಡರೆ ಮೈದುನರ ಕಿವಿಯಲ್ಲಿ ಚಟಾಕಿ ಹಾರಿಸುತ್ತಿದ್ದರಂತೆ. ಡಿಸ್ನಿಲ್ಯಾಂಡ್‌ಗೆ ಹೋದಾಗ ಚಿಕ್ಕ ಮಕ್ಕಳಂತೆ ವಿವಿಧ ‘ರೈಡ್’ಗಳಿಗೆ ಪದೇ ಪದೇ ಅಜ್ಜಿ ನುಗ್ಗಿದ್ದನ್ನು ಮೊಮ್ಮಕ್ಕಳಾದ ಕರಿಷ್ಮಾ, ಕರೀನಾ ಹಾಗೂ ರಣಬೀರ್ ಕಪೂರ್ ಖುಷಿಯಿಂದ ನೆನೆದಿದ್ದರು.

ಮದುವೆಯಾದ ಹೊಸತರಲ್ಲಿ ಸಂಸಾರದ ಖರ್ಚಿಗೆಂದು ಸೀರೆಗಳ ಮೇಲೆ ಕಸೂತಿ ಹಾಕುತ್ತಿದ್ದ ಕೃಷ್ಣಾ, ಆಮೇಲೆ ಕಷ್ಟಗಳನ್ನು ಮರೆಯಲು ಆ ಕೆಲಸ ಮಾಡಿದ್ದನ್ನು ಕಂಡ ಆಪ್ತೇಷ್ಟರ ಕಣ್ಣಲ್ಲೂ ನೀರು ಜಿನುಗಿದ್ದಿದೆ. ‘ಬರ್ಸಾತ್’ ಸಿನಿಮಾ ಮಾಡಲು ರಾಜ್ ಕಪೂರ್ ಹಣ ಹೊಂದಿಸಲೆಂದು ಹೆಣಗಾಡುತ್ತಿದ್ದಾಗ ತಮ್ಮ ಒಡವೆಗಳ ಗಂಟು ತಂದು ಕೈಲಿಟ್ಟಿದ್ದ ‘ಭಾರತಿಯ ನಾರಿ’ಯೂ ಅವರೇ.

ರಾಜ್ ಕಪೂರ್ ಕಂಠ ಮಟ್ಟ ಕುಡಿದು ಬಂದು, ಬಾತ್‌ಟಬ್‌ನಲ್ಲಿ ಕುಳಿತು ಮನಸೋಇಚ್ಛೆ ಮಾತನಾಡತೊಡಗಿದರೆ ಸಮಾಧಾನ ಮಾಡುತ್ತಿದ್ದುದು ಇದೇ ಶ್ವೇತಸೀರೆಧಾರಿ ಹೆಣ್ಣುಮಗಳು.

ನರ್ಗೀಸ್ ಜತೆ ರಾಜ್ ಕಪೂರ್ ಹದಿನಾರು ಸಿನಿಮಾಗಳಲ್ಲಿ ಅಭಿನಯಿಸಿದರು. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ಹಬ್ಬಿತು. ಆಮೇಲೆ ವೈಜಯಂತಿ ಮಾಲಾ ಜತೆಗೂ ರಾಜ್ ಕಪೂರ್ ಸರಸ ನಡೆಯುತ್ತಿದೆ ಎನ್ನುವ ಗುಸುಗುಸು. ಅಂಥ ಮಾತು ದಟ್ಟವಾದಾಗಲೆಲ್ಲ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೇ ಕೃಷ್ಣಾ ಹೋದ ಉದಾಹರಣೆಗಳೂ ಇವೆ. ಅವರನ್ನು ಕಂಡರೆ ನರ್ಗಿಸ್, ರಾಜ್ ಕಪೂರ್ ನಿಂತ ಜಾಗದಲ್ಲಿ ಇರುತ್ತಲೇ ಇರಲಿಲ್ಲ. ಆದರೆ, ವೈಜಯಂತಿ ಅಲ್ಲಿಂದ ಕದಲುತ್ತಿರಲಿಲ್ಲ. ಅದನ್ನು ನೋಡಿ ಮೈದುನ ಶಮ್ಮಿ ಕಪೂರ್ ಒಮ್ಮೆ ವೈಜಯಂತಿ ಮಾಲಾ ಅವರನ್ನು ಎಚ್ಚರಿಸಿದ್ದರಂತೆ. ಮಡದಿ, ಮಕ್ಕಳನ್ನುಬಿಡಲು ರಾಜ್ ಕಪೂರ್ ಸಿದ್ಧರಿರಲಿಲ್ಲ. ಅದಕ್ಕೇ ನರ್ಗಿಸ್ ಆಮೇಲೆ ಸುನಿಲ್ ದತ್ ಅವರನ್ನು ಮದುವೆಯಾದದ್ದು. ಒಂದು ಔತಣಕೂಟದಲ್ಲಿ ಸಿಕ್ಕಾಗ, ‘ನನ್ನದೇ ತಪ್ಪು, ರಾಜ್ ಕಪೂರ್ ಅವರದ್ದಲ್ಲ’ ಎಂದು ನರ್ಗೀಸ್ ಹೇಳಿಕೊಂಡಾಗ, ಕೃಷ್ಣಾ ಅಪ್ಪಿಕೊಂಡು ಸುಮ್ಮನಾಗಿದ್ದನ್ನು ಕಂಡವರೂ ಇದ್ದಾರೆ.

‘ಭಾಭೀಜಿ’ ಎಂದು ಮನೆಯ ಬಹುತೇಕರಿಂದ ಕರೆಸಿಕೊಂಡ, ತನ್ನ ಬಿಳಿ ಸೀರೆಗೆ ತಾನೇ ಹೊಸ ಕಸೂತಿ ಮಾಡಿಕೊಂಡ, ತುಂಬು ಸಂಸಾರದ ನೊಗ ಹೊತ್ತೂ ಗಂಡನ ಸಿನಿಮಾ ಕನಸುಗಳು- ಹುಚ್ಚುತನವನ್ನು ಸಹಿಸಿಕೊಂಡ ಗಟ್ಟಿಗಿತ್ತಿ ಕೃಷ್ಣಾ, ಮೊನ್ನೆ ಕಣ್ಮುಚ್ಚಿದಾಗ 87ರ ಹರೆಯ. ಆ ಸಂದರ್ಭದಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡ ಎಲ್ಲರಿಗೂ ‘ರಾಜ್ ಕಪೂರ್ ಪುರಾಣ’ದ ಕಥೆಗಳು ಹಾಗೂ
ಅವುಗಳಲ್ಲಿನ ಈ ‘ಕಲಾವಿದೆ’ಯ ಪಾತ್ರತೂಕ ಎಂಥದೆನ್ನುವುದು ತಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.