ADVERTISEMENT

ಅಧ್ವಾನಗಳಲ್ಲಿ ಇದೂ ಒಂದು...

ಎಸ್.ಜಿ.ಸಿದ್ದರಾಮಯ್ಯ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಎಂಟು ತಿಂಗಳಿಗೇ ಪಿಎಚ್‌ಡಿ: ತುಮಕೂರು ವಿ.ವಿ.ಯ ಸಾಧನೆ (ಪ್ರ.ವಾ. ಡಿ.೮). ಈ ಸುದ್ದಿ ಓದಿ ಆಶ್ಚರ್ಯವೇನೂ ಆಗಲಿಲ್ಲ. ಏಕೆಂದರೆ ಹಿಂದಿನ ಕುಲಪತಿ ಮಾನ್ಯ ಶರ್ಮಾ ಅವರ ಕಾಲದಲ್ಲಿ ಆಗಿರುವ ಹಲವು ಬಗೆಯ ಅಧ್ವಾನಗಳಲ್ಲಿ ಇದೂ ಒಂದು. ಇದೇ ವಿ.ವಿ. ಆವರಣದಲ್ಲಿ ಗಣಪತಿ, ಸರಸ್ವತಿ, ಮಾರುತಿ, ಹುತ್ತದ ನಾಗರಕಲ್ಲು ಹೀಗೆ ಹಲವು ಗುಡಿಗಳನ್ನು ಕಟ್ಟುವುದರ ಜೊತೆಗೆ ತಮಗೆ ಬೇಕಾದ ಪ್ರತಿಮೆಗಳನ್ನೂ ಸ್ಥಾಪಿಸಿರುವುದು ಅವರ ಮತ್ತೊಂದು ಸಾಧನೆ.

ಇವರು ಈ ವಿಶ್ವವಿದ್ಯಾಲಯಕ್ಕೆ ಬರುವ ಮುಂಚೆ ಇದೇ ಸರ್ಕಾರಿ ಕಾಲೇಜಿನಲ್ಲಿ ನಾಲ್ಕು ಸಾವಿರ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದರು. ಎಲ್ಲರೂ ಗ್ರಾಮೀಣ ಭಾಗದಲ್ಲಿನ ಮಧ್ಯಮವರ್ಗದ ಸಮುದಾಯಗಳಿಗೆ ಸೇರಿದವರು. ಕಾಲೇಜಿಗೆ ಗುಣಾತ್ಮಕತೆಯ ಶಕ್ತಿ ತುಂಬುವ ಹೆಸರಿನಲ್ಲಿ ಈ ಸಂಖ್ಯೆಯನ್ನು ಕೇವಲ ಆರು ನೂರಕ್ಕೆ ಇಳಿಸಿದ್ದು ಮಾನ್ಯ ಶರ್ಮಾ ಅವರ ಮತ್ತೊಂದು ಸಾಧನೆ. ಇಂಥ ಶರ್ಮಾಜಿಯವರು ಎಂಟು ತಿಂಗಳಿಗೇ ಪಿಎಚ್‌ಡಿ ಪ್ರದಾನಿಸಿರುವ ಗುಣಾತ್ಮಕತೆ ಮೆರೆದಿರುವುದು ಅವರ ಸಾಧನೆಯ ಒಂದು ಪವಾಡ.

ಈ ಎಲ್ಲಾ ವಿಚಾರಗಳನ್ನು ಹೆಸರು ಹೇಳದಂತೆ ಬಹಿರಂಗಪಡಿಸುತ್ತಿರುವ ಮಾನ್ಯ ಸದಸ್ಯರ ಅಂತಃಸ್ಸಾಕ್ಷಿಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಶಿಕ್ಷಣ ಎಲ್ಲರಿಗೂ ಅಲ್ಲ; ಕೆಲವರಿಗೆ ಮಾತ್ರ ಎಂಬ ಸನಾತನ ಬುದ್ಧಿಗೆ ಶರ್ಮಾ ಅವರ ಈ ಸಾಧನೆ ಒಂದು ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.