ಕನ್ನಡದ ಹಿರಿಯ ಲೇಖಕ ಮತ್ತು ಚಿಂತಕ ಡಾ. ಯು.ಆರ್. ಅನಂತಮೂರ್ತಿಯವರಿಗೆ ಅವರ ಒಂದು ರಾಜಕೀಯ ಅಭಿಪ್ರಾಯ ಮತ್ತು ತಮ್ಮ ವೈಚಾರಿಕ ಲೇಖನವೊಂದರಲ್ಲಿ ದಾಖಲಿಸಿದ ಒಂದು ಪ್ರಸಂಗವನ್ನು ನೆಪವಾಗಿಟ್ಟುಕೊಂಡು ಕರ್ನಾಟಕದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾನಸಿಕ ಕಿರುಕುಳ ನೀಡುತ್ತಿರುವ ಪ್ರವೃತ್ತಿ ಮುಂದುವರೆದಿರುವುದು ವಿಷಾದಕರ.
ನಾವು ಕೆಲವರು ಇತ್ತೀಚೆಗೆ ಅನಂತಮೂರ್ತಿಯವರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲೂ ಅವರಿಗೆ ನಿಂದನಾ ಕರೆಗಳು ಬಂದಿದ್ದನ್ನೂ, ಅದರಿಂದ ಅನಂತಮೂರ್ತಿಯವರ ಕುಟುಂಬ ಅನುಭವಿಸುತ್ತಿರುವ ನೋವನ್ನು ಕಣ್ಣಾರೆ ಕಂಡು ಈ ಪತ್ರ ಬರೆಯುತ್ತಿದ್ದೇವೆ.
ನಮ್ಮ ಸಂವಿಧಾನ, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಅಭಿಪ್ರಾಯದ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನೀಡಿದೆ. ಅನಂತಮೂರ್ತಿಯವರೂ ಈ ದೇಶದ ಪ್ರಜೆಯಾಗಿ ಅದನ್ನು ಚಲಾಯಿಸಿದ್ದಾರೆ. ಮೋದಿಯವರನ್ನು ಕುರಿತ ಅವರ ಅಭಿಪ್ರಾಯ ತೀವ್ರವಾಗಿರಬಹುದು. ಆದರೆ ಅದು ಸಂವಿಧಾನ ಅಥವಾ ಸಭ್ಯತೆಯ ಚೌಕಟ್ಟನ್ನು ಮೀರಿರಲಿಲ್ಲ. ಮಾಧ್ಯಮಗಳು ತಮ್ಮ ಮಾತುಗಳನ್ನು ತಿರುಚಿ ಪ್ರಕಟಿಸಿವೆ ಎಂದು ಅವರು ಬಹು ಹಿಂದೆಯೇ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಹಾಗೇ, ಇತ್ತೀಚೆಗೆ ಕನ್ನಡದ ಹಿರಿಯ ವಿದ್ವಾಂಸ ಎಂ.ಎಂ. ಕಲಬುರ್ಗಿಯವರು, ಬಸವಶ್ರೀ ಪ್ರಶಸ್ತಿ ಹೆಸರಿನಲ್ಲಿ ಅನಂತಮೂರ್ತಿಯವರನ್ನು ವಿವಾದಕ್ಕೀಡು ಮಾಡುವ ತಮ್ಮ ವಿಫಲ ಪ್ರಯತ್ನದ ನಂತರ ಈಗ ಮತ್ತೊಂದು ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿರುವುದು ಕನ್ನಡ ಸಾಹಿತ್ಯ- ಸಂಸ್ಕೃತಿಗಳ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಶೋಚನೀಯ ಸಂಗತಿಯಾಗಿದೆ.
ಅವರು ಯಾವುದೋ ಸಮಾರಂಭದಲ್ಲಿ ಮೂಢನಂಬಿಕೆಗಳ ಬಗ್ಗೆ ಮಾತನಾಡುತ್ತಾ, ಅನಂತಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ದಾಖಲಿಸಿರುವ ತಮ್ಮ ಬಾಲ್ಯದ ಪ್ರಸಂಗವೊಂದನ್ನು ಅನಗತ್ಯವಾಗಿ ಮತ್ತು ತಪ್ಪಾಗಿ ಉಲ್ಲೇಖಿಸಿ ಅವರ ಬಗ್ಗೆ ಸಾಮಾನ್ಯ ಜನತೆಯಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಲು ಕಾರಣರಾಗಿದ್ದಾರೆ.
ಸಂಪೂರ್ಣವಾಗಿ ವೈಯಕ್ತಿಕ ನೆಲೆಯ ಈ ಸೂಕ್ಷ್ಮ ಸಾಹಿತ್ಯಕ ನಿರೂಪಣೆಯು ಕಲಬುರ್ಗಿಯವರ ಅನುಚಿತ ರೀತಿಯ ಉಲ್ಲೇಖ ಮತ್ತು ಸ್ಥೂಲ ಮಾಧ್ಯಮ ವರದಿಗಾರಿಕೆಯಿಂದಾಗಿ ಒಂದು ಸಾರ್ವಜನಿಕ ದೈವಶ್ರದ್ಧೆಯ ಪ್ರಶ್ನೆಯಾಗಿ ಮಾರ್ಪಟ್ಟು ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ.
ಇದು ಬೌದ್ಧಿಕ ವಿವೇಚನೆ, ಸೂಕ್ಷ್ಮ ಸಾಹಿತ್ಯಕ, -ಸಾಂಸ್ಕೃತಿಕ ಚರ್ಚೆಗಳಿಗೆ ಅನುಕೂಲಕರ ವಾತಾವರಣವಿಲ್ಲದ ಕೆಟ್ಟ ಕಾಲ. ಇದನ್ನರಿತು ನಮ್ಮ ಲೇಖಕ- ಚಿಂತಕರೂ, ಸಮಾನ ಮನಸ್ಕ ವಲಯಗಳಲ್ಲಿ ಮಾತ್ರ ಚರ್ಚೆಗೆ ಸಲ್ಲುವ ವಿಷಯಗಳನ್ನು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ತಂದು ಮಾಧ್ಯಮಗಳ ಮತ್ತು ಅವುಗಳ ಹಿಂದಿರುವ ಪ್ರತಿಗಾಮಿ ಶಕ್ತಿಗಳಿಗೆ ಆಹಾರ ಒದಗಿಸುವ ಸುದ್ದಿಶೂರತ್ವ ಮತ್ತು ಪ್ರಚಾರ ಪ್ರಿಯತೆಯಿಂದ ದೂರ ಉಳಿಯುವುದು ಒಳಿತೆಂದು ನಾವು ಭಾವಿಸುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.