ADVERTISEMENT

ಅನುವಾದದ ಕಳ್ಳಾಟ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST

ಅನುವಾದದ ಎಡವಟ್ಟುಗಳ ಕುರಿತು ಬಿ.ಎಸ್. ಶೈಲಜಾ ಅವರ ‘ಗೂಗಲ್‌ ಮತ್ತು ಅನುವಾದ’ ಲೇಖನ (ಸಂಗತ, ಸೆ. 28) ಓದಿದ ಬಳಿಕ ಅದಕ್ಕೆ ಇನ್ನೊಂದಿಷ್ಟು ಸೇರಿಸಬೇಕೆನಿಸಿತು.

ಈಗ ನಮ್ಮ ರಾಜ್ಯದಲ್ಲಿ ಮಂಡನೆಯಾಗುವ ಮಸೂದೆಗಳ ಕರಡುಗಳು ಮೊದಲು ಇಂಗ್ಲಿಷ್‌ನಲ್ಲಿ ಸಿದ್ಧವಾಗುತ್ತವೆ. ಇವು ಕಾಯ್ದೆಯಾದ ಬಳಿಕ, ಯಾರಿಗೂ ಸುಲಭವಾಗಿ ಅರ್ಥವಾಗದ ರೀತಿಯಲ್ಲಿ ಅವನ್ನು ಕನ್ನಡಕ್ಕೆ ಅನುವಾದಿಸುವ ಪ್ರಹಸನ ನಡೆಯುತ್ತದೆ. ಸರಳಗನ್ನಡ ಮಾತ್ರ ಬಲ್ಲವರಾದ ಸಾಮಾನ್ಯ ಜನರ ಹಿತ ಕಡೆಗಣಿಸಿ ‘ಮಕ್ಕಿ ಕಾ ಮಕ್ಕಿ’ ಮಾದರಿಯ ಅನುವಾದದಲ್ಲಿ ಬಳಕೆಯಾಗುವ ಪಾರಿಭಾಷಿಕ ಶಬ್ದಗಳನ್ನಂತೂ ದೇವರೇ ಅರ್ಥೈಸಬೇಕು! ಹೀಗಾಗಿ ಇಂಗ್ಲಿಷ್‌ ಬಲ್ಲ ವಕೀಲರಿಗೆ ಬೇಡಿಕೆ ಹೆಚ್ಚು.

ಕಂಪ್ಯೂಟರ್‌ ಪರೀಕ್ಷೆ, ಸಿಇಟಿ ಪರೀಕ್ಷೆಗಳನ್ನೊಳಗೊಂಡು ಎಲ್ಲ ಮಾದರಿಯ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಮೊದಲು ಇಂಗ್ಲಿಷ್‌ನಲ್ಲಿ ಜನ್ಮ ತಾಳುತ್ತವೆ. ಆನಂತರ ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ‘ಶಾಸ್ತ್ರ’ ಮಾಡುತ್ತಾರೆ. ಪ್ರಶ್ನೆಪತ್ರಿಕೆ ನೋಡಿ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳು ದಿಗಿಲು ಬೀಳಬೇಕು. ಹಾಗಿರುತ್ತದೆ ಕನ್ನಡ ಅನುವಾದ. ಇಂಥ ಸತ್ವಹೀನ ಅನುವಾದದ ಕಾರಣದಿಂದಾಗಿ ಕನ್ನಡವೆಂದರೆ ಸುಲಭಕ್ಕೆ ಅರ್ಥವಾಗದ, ಕಾನೂನು-ಶಾಸ್ತ್ರ ಇತ್ಯಾದಿ ರಚಿಸಲು ಯೋಗ್ಯವಲ್ಲದ ಭಾಷೆ; ಇಂಗ್ಲಿಷ್‌ ಮಾತ್ರವೇ ಇದಕ್ಕೆಲ್ಲಾ ಹೇಳಿಮಾಡಿಸಿದ ‘ಸೂಪರ್‌’ ಭಾಷೆ ಎನ್ನುವಂತಾಗಿದೆ!

ADVERTISEMENT

ಸರ್ವ ಕಾರ್ಯಗಳಿಗೂ ಸಮರ್ಥ ಭಾಷೆಯಾಗಿರುವ ಕನ್ನಡದ ಬಗ್ಗೆ ಇಂಥ ಭಾವನೆ ಮೂಡುವುದನ್ನು ತಪ್ಪಿಸಲು ಎಲ್ಲಾ ಮಸೂದೆಗಳು, ರಾಜ್ಯಪತ್ರದಲ್ಲಿ ಹೊರಡಿಸಲಾಗುವ ಎಲ್ಲಾ ಅಧಿಸೂಚನೆಗಳು, ಸುತ್ತೋಲೆಗಳು ಮತ್ತು ಪ್ರಶ್ನೆಪತ್ರಿಕೆಗಳು ಕಡ್ಡಾಯವಾಗಿ ಮೊದಲು ಕನ್ನಡದಲ್ಲಿ ತಯಾರಾಗುವಂತೆ ಮಾಡಬೇಕು. ಇದು ಜನಪರ ಆಡಳಿತದ ಮುಖ್ಯ ಲಕ್ಷಣವೂ ಹೌದು. ಕನ್ನಡಕ್ಕೆ ಕಳಂಕ ತರುವ ಕೆಟ್ಟ ಅನುವಾದದ ಕಳ್ಳಾಟಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತು ನಿಗಾ ವಹಿಸುವುದು ಅಗತ್ಯ.

–ಹಜರತಅಲಿ ದೇಗಿನಾಳ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.