ADVERTISEMENT

ಅರಿಯದೆ ಆಡುವುದು ತರವಲ್ಲ

ಜಿ.ವಿ.ಗಣೇಶಯ್ಯ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

`ಅನರ್ಥಕಾರಿ ಅಷ್ಟಮಂಗಳ ಯಾಗ~ ಎಂಬ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಲೇಖನಕ್ಕೆ (ಸಂಗತ: ಸೆ. 6) ಪ್ರತಿಕ್ರಿಯೆ.

ಸ್ವಾಮೀಜಿಯವರು ಯಜ್ಞ - ಯಾಗ, ಹೋಮ - ಹವನಾದಿಗಳನ್ನೆಲ್ಲಾ ಸಾರಾಸಗಟಾಗಿ ಪ್ರಯೋಜನವಿಲ್ಲದ ಮೌಢ್ಯ ಅನ್ನುವಂತೆ ವಾದಿಸಿದ್ದಾರೆ. ಹೋಮ - ಹವನಾದಿಗಳಲ್ಲಿ ಉಪಯೋಗಿಸುವ ಸಮಿತ್ತುಗಳಿಂದ ವಾತಾವರಣಕ್ಕೆ ಏನೆಲ್ಲ ಲಾಭಗಳಾಗುತ್ತವೆ ಎಂಬುದನ್ನು ಈಗಾಗಲೇ ಎಷ್ಟೋ ವಿಜ್ಞಾನಿಗಳು ಪ್ರಯೋಗಗಳನ್ನು ಮಾಡಿ ಸಾಬೀತು ಪಡಿಸಿದ್ದಾರೆ. ಸ್ವಾಮೀಜಿಯವರಿಗೆ ಈ ಬಗೆಗೆ ಮಾಹಿತಿಯ ಕೊರತೆ ಇರುವ ಹಾಗೆ ಕಾಣಿಸುತ್ತದೆ.

ಸ್ವಾಮೀಜಿ ಒಪ್ಪಿರುವ ಇಂದಿನ ವಿಜ್ಞಾನದ ಕೊಡುಗೆಯಾದ ಸೊಳ್ಳೆ ನಿವಾರಕ ಸುರಳಿಗಳ ವಿಚಾರ ಗೊತ್ತೇ? ಇಂತಹ ಒಂದು ಸುರಳಿಯು ನೂರು ಸಿಗರೇಟ್ ಸುಟ್ಟಷ್ಟೇ ಅನರ್ಥಕಾರಿ ಅಂತ ಸಾಬೀತಾಗಿದೆ!

ವಿಜ್ಞಾನದ ಉಪಯುಕ್ತತೆಗಳನ್ನು ನೋಡಿ: ಹಿರೋಷಿಮಾ ನಾಗಸಾಕಿಗಳ ಮೇಲೆ ಪ್ರಯೋಗಿಸಲಾದ ಅಣುಬಾಂಬುಗಳು ಮಾಡಿದ ಅನಾಹುತ ಅಲ್ಪವೇ? ಹಿಂದೆ ಶಸ್ತ್ರಾಸ್ತ್ರ ಪ್ರಯೋಗ ಮಾಡಿದಾಗ ಸಂಬಂಧಪಟ್ಟ ವ್ಯಕ್ತಿಗೆ ಮಾತ್ರ ತೊಂದರೆಯಾಗುತ್ತಿತ್ತೇ ವಿನಃ ಇತರ ಅಮಾಯಕರುಗಳಿಗೇನೂ ತೊಂದರೆಯಾಗುತ್ತಿರಲಿಲ್ಲ.

ಬೇಡವೆಂದರೆ ಪ್ರಯೋಗಿಸಿದ ಅಸ್ತ್ರವನ್ನು ಉಪಸಂಹರಿಸುವ ಕ್ರಮ ಕೂಡ ಇದ್ದಿತು. ಆದರೀಗ ಒಮ್ಮೆ ಅಸ್ತ್ರಪ್ರಯೋಗಿಸಿದರೆ ಮುಗಿಯಿತು. ಅದನ್ನು ಉಪಸಂಹರಿಸುವ ತಂತ್ರಜ್ಞಾನ ಆಧುನಿಕರಿಗಿನ್ನೂ ಕೈಗೂಡಿಲ್ಲ. ಸಾವಿರಾರು ವರ್ಷಗಳ ಹಿಂದೆ ರಚಿಸಲಾದ ನಾಡೀಗ್ರಂಥಗಳಲ್ಲಿ ಇಂದಿನ ಜನಸಾಮಾನ್ಯರ ಜೀವಿತದ ಆಗುಹೋಗುಗಳ ವಿವರಗಳನ್ನು ಹೆಸರುಗಳೊಂದಿಗೆ ಅತ್ಯಂತ ನಿಖರವಾಗಿ ಬಿಚ್ಚಿಡಲು ಹೇಗೆ ಸಾಧ್ಯವಾಯಿತು ಅನ್ನುವುದನ್ನು ಇಂದಿನ ವಿಜ್ಞಾನ ಇನ್ನೂ ಪತ್ತೆ ಮಾಡಿಲ್ಲ.
 
ರಾಸಾಯನಿಕ ವಿಷವಸ್ತುವಿನಿಂದ ಕೂಡಿದ ಆಹಾರ ಪದಾರ್ಥಗಳು ಆಧುನಿಕ ವಿಜ್ಞಾನದ ಕೊಡುಗೆ. ವಿವೇಕವಿಲ್ಲದ ಜನರ ಕೈಗೆ ವಿಜ್ಞಾನ ಸಿಕ್ಕಿದರೆ ಅದು ಭಸ್ಮಾಸುರನಿಗೆ ಉರಿಹಸ್ತ ಸಿಕ್ಕಂತೆಯೇ!

ಜಗದೀಶ್‌ಚಂದ್ರ ಬೋಸರಿಗಿಂತ ಎಷ್ಟೋ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಭೃಗುಮಹರ್ಷಿಯ `ಸಸ್ಯಗಳಿಗೆ ಜೀವವಿದೆ, ಮನಸ್ಸಿದೆ, ಭಾವನೆಗಳಿವೆ~ ಎಂಬುದನ್ನು ತಿಳಿಸಿರುತ್ತಾನೆ. ಈ ಕಾರಣಗಳಿಂದ ಹಳೆಯ ಆಚರಣೆಗಳ ವಿಚಾರದಲ್ಲಿ ಸಂಶೋಧನೆ ನಡೆಸಿ ಸತ್ಯಾಸತ್ಯತೆಗಳನ್ನು ತಿಳಿದು ನಂತರ ಮಾತನಾಡಿದರೆ ಅದಕ್ಕೊಂದು ತೂಕವಿರುತ್ತದೆ.
 -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.