ADVERTISEMENT

ಆರು ತಿಂಗಳಿಂದ ವೇತನ ಇಲ್ಲ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು 1991 ರಿಂದ 1995ರ ಒಳಗೆ ಪ್ರಾರಂಭವಾಗಿರುವ ಕಾಲೇಜುಗಳಿಗೆ ವೇತನಾನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧ ಎಂದು ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹೇಳಿಕೆ ನೀಡುತ್ತಿದ್ದಾರೆ. 2012-13 ನೇ ಸಾಲಿನ ಬಜೆಟ್‌ನಲ್ಲಿ ರೂ.110 ಕೋಟಿ  ಬಿಡುಗಡೆಯೂ ಆಗಿದೆ. ಆದರೆ ಕಾಲೇಜುಗಳ ಕಡತಗಳನ್ನು ವಿಲೇವಾರಿ ಆಗಿಲ್ಲ.

ಪ.ಪೂ.ಕಾಲೇಜುಗಳ ಪ್ರಥಮ ದರ್ಜೆ ಹುದ್ದೆಯ ನೇಮಕಾತಿಗೆ ಕನಿಷ್ಠ 8 ಗಂಟೆ, ಗರಿಷ್ಠ 16 ಗಂಟೆಗಳ ಕಾರ್ಯಭಾರ ಇರಬೇಕು. ಎರಡನೆ ಹುದ್ದೆಯ ನೇಮಕಾತಿಗೆ ಮಾತ್ರ 16 ಗಂಟೆಗಳ ಕಾರ್ಯಭಾರ ಕಡ್ಡಾಯ ಎಂಬ ಸರ್ಕಾರಿ ಆದೇಶವಿದೆ. ಆದರೆ ಪ.ಪೂ.ಶಿಕ್ಷಣ ಇಲಾಖೆಯ ಆಯುಕ್ತರು ಸರ್ಕಾರದ ಆದೇಶವನ್ನು ಪರಿಗಣಿಸದೆ 1987 ರಿಂದ 1991 ರ ಒಳಗೆ ಪ್ರಾರಂಭವಾಗಿ, ಅನುದಾನದ ಆದೇಶ ಆಗಿರುವ 39 ಕಾಲೇಜುಗಳಿಗೆ  ಆರು ತಿಂಗಳುಗಳಾದರೂ ವೇತನ ಬಿಡುಗಡೆ ಮಾಡಿಲ್ಲ.

1991 ರಿಂದ 1995ರ ಒಳಗೆ ಪ್ರಾರಂಭವಾಗಿರುವ  99 ಕಾಲೇಜುಗಳ ಕಡತಗಳು ಅಧೀನ ಕಾರ್ಯದರ್ಶಿ ಹಾಗೂ ಉಪಕಾರ್ಯದರ್ಶಿ ಅವರಿಂದ ಅನುಮೋದನೆಯಾಗಿವೆ. ಪ್ರಧಾನ ಕಾರ್ಯದರ್ಶಿ ಮತ್ತು ಶಿಕ್ಷಣ ಸಚಿವರು ಸಹಿ ಮಾಡಿ ಆದೇಶಿಸಬೇಕಿದೆ. ಆದರೆ ಶಿಕ್ಷಣ ಸಚಿವರ ಬಳಿ ಹೋಗಿ ಬೇಡಿದರೂ `ತಕ್ಷಣ ಮಾಡುತ್ತೇನೆ~ ಎನ್ನುವ ಸಿದ್ಧ ಉತ್ತರ ನೀಡುತ್ತಾರೆ. ಪ್ರಧಾನ ಕಾರ್ಯದರ್ಶಿ ಅವರು ಸಚಿವರು ಹೇಳಲಿ ಮಾಡುತ್ತೇವೆ ಎನ್ನುತ್ತಾರೆ. ಸಮಸ್ಯೆ ಪರಿಹಾರವಾಗದೆ ಕಗ್ಗಂಟಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.