ADVERTISEMENT

ಇಂಥ ಸಮ್ಮೇಳನಗಳು ಬೇಕೆ?

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 6:30 IST
Last Updated 2 ಫೆಬ್ರುವರಿ 2011, 6:30 IST

ಇನ್ನೇನು ಪ್ರಾರಂಭವಾಗಲಿರುವ 77ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಮನದಲ್ಲಿ ಇಟ್ಟುಕೊಂಡು ಪ್ರಕಟವಾಗಿರುವ ‘ಸಾಪ್ತಾಹಿಕ ಪುರವಣಿ’ಯಲ್ಲಿ (ಜ. 30) ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು ಸಾಹಿತ್ಯ ಸಮ್ಮೇಳನಗಳ ಬಗೆಗೆ ನಡೆಸಿರುವ ಚಿಂತನೆ, ಈ ಹಿಂದೆ ನನ್ನ ತಂದೆಗೆ ಹಾಗೂ ನಮಗೆ ಆದ ಅವಮರ್ಯಾದೆಯ ದೃಷ್ಟಿಯಿಂದ ನನ್ನ ಗಮನ ಸೆಳೆಯಿತು.

1990ರ ಡಿಸೆಂಬರ್‌ನಲ್ಲಿ ಮೈಸೂರಿನಲ್ಲಿ ನಡೆದ (60ನೇ) ಸಮ್ಮೇಳನದ ಅಧ್ಯಕ್ಷರಾಗಿದ್ದವರು ನನ್ನ ತಂದೆ (ಕೆ.ಎಸ್.ನರಸಿಂಹಸ್ವಾಮಿ). ಸರಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭವಾಗಿ ಇರ್ವಿನ್ ಸರ್ಕಲ್‌ಗೆ ಬರುವ ಹೊತ್ತಿಗೆ ಮುಖ್ಯಮಂತ್ರಿಗಳು ಬಂದರೆಂಬ ಸುದ್ದಿ ಬಂತು. ಮೆರವಣಿಗೆ ಚೆಲ್ಲಾಪಿಲ್ಲಿಯಾಗಿ, ಅಧ್ಯಕ್ಷರನ್ನು ಬಿಟ್ಟು ಎಲ್ಲರೂ ಓಡಿಹೋದರು. ಕುಟುಂಬದ ಸದಸ್ಯರು ಸಮ್ಮೇಳನ ಸಭಾಂಗಣಕ್ಕೆ ಹೋಗಲು ಸಾಧ್ಯವಾಗದೆ ಪೊಲೀಸ್‌ರೊಡನೆ ಜಗಳವಾಯಿತು. ನನ್ನ ತಾಯಿ ಹೇಗೋ ಕಷ್ಟಪಟ್ಟು ವೇದಿಕೆಯ ಬಳಿ ಹೋಗಿ ನಿಂತರೆ, ಅವರನ್ನು ಕೇಳುವವರೇ ಇಲ್ಲ.

ನಾವೆಲ್ಲರೂ ಏನೂ ಮಾಡಲಾಗದೆ ಪೆಂಡಾಲ್‌ನ ಹೊರಗಡೆ ಹುಲ್ಲುಹಾಸಿನ ಮೇಲೆ ಕುಳಿತುಕೊಳ್ಳಬೇಕಾಯಿತು.
ಭಾಷಣಗಳ ಸುರಿಮಳೆ ಪ್ರಾರಂಭವಾಯಿತು. ಸಮ್ಮೇಳನಾಧ್ಯಕ್ಷರು 15 ನೆಯವರಾಗಿ ಭಾಷಣ ಮಾಡಲು ಎದ್ದಾಗ ಜನಜಂಗುಳಿ ಕರಗಿಹೋಗಿತ್ತು. ಕೊನೆಗೆ ‘ಎಲ್ಲರಿಗೂ ಮೈಸೂರು ಪಾಕ್, ಮೈಸೂರು ಮಲ್ಲಿಗೆ ಕೊಡಲಾಗುವುದೆಂದು’ ಘೋಷಣೆ ಮಾಡುವ ಹಣೆಬರಹವೂ ಒದಗಿತು- ನನ್ನ ತಂದೆಗೆ.

ಡಾ. ಜಿ.ಎಸ್.ಎಸ್. ಹೇಳಿರುವಂತೆ ಸಮ್ಮೇಳನಾಧ್ಯಕ್ಷರಿಗೆ ಯಾವ ಪ್ರಾಮುಖ್ಯತೆಯೂ ಇಲ್ಲ, ಮಹತ್ವದವರಲ್ಲವೆಂಬಂತೆ ಬಿಂಬಿಸುವ, ಬರೀ ಮಂತ್ರಿಮಹೋದಯರನ್ನು, ಮಠಾಧೀಶರನ್ನು ಓಲೈಸುವ ಈ ಜಾತ್ರೆಯಿಂದ ಯಾವ ಪುರುಷಾರ್ಥ ಸಾಧಿಸಿದಂತೆ! ನನ್ನ ತಂದೆಯವರಿಗೆ ಸಮ್ಮೇಳನಾಧ್ಯಕ್ಷರಾಗಿ ದೊರೆತ ‘ಗೌರವ’ಕ್ಕೆ ಯಾರು ಹೊಣೆ. ಸಮ್ಮೇಳನಗಳು ಹೀಗಿರಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.