1ರಿಂದ 7ನೇ ತರಗತಿಯವರೆಗೆ ಒಳ್ಳೆಯ ಬೋಧಕರಿಲ್ಲ ಎಂಬ ಮಾಜಿ ಮುಖ್ಯಮಂತ್ರಿಯವರ ಕಾಳಜಿ ಮೆಚ್ಚತಕ್ಕದ್ದೆ. ಸ್ವಾತಂತ್ರ್ಯ ಬಂದ ಏಳು ದಶಕಗಳ ನಂತರವಾದರೂ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿಲ್ಲ ಎಂಬ ಸಂಶೋಧನೆ ಮಾಡಿರುವ ಕಳಕಳಿ ಅಭಿನಂದನೀಯ.
ಭವಿಷ್ಯದ ಪ್ರಜೆಗಳನ್ನು ತಯಾರಿಸುವ ಗುರುತರ ಜವಾಬ್ದಾರಿ ಇರುವ ಶಿಕ್ಷಣ ಇಲಾಖೆ ಇದಕ್ಕಾಗಿ ಮುಂದಿನ ವರ್ಷದಿಂದ ಆರನೇ ತರಗತಿಯಿಂದ ಬೋಧಿಸಲು ಬಿ.ಎಡ್ ಪದವೀಧರರನ್ನು ನೇಮಿಸುವ ತೀರ್ಮಾನ ಕೈಗೊಂಡಿರುವುದೂ ಸ್ವಾಗತಾರ್ಹವೆ...! ಆದರೆ ಒಂದರಿಂದ ಆರನೇ ತರಗತಿಯೊಳಗೆ (ಮಾಜಿ ಮುಖ್ಯಮಂತ್ರಿಯವರ ಅನಿಸಿಕೆಯಂತೆ) ಏನೂ ಕಲಿಯದ ಮಕ್ಕಳಿಗೆ ಆರನೇ ತರಗತಿಯಿಂದ ಬಿ.ಎಡ್ ಪದವೀಧರರೂ ಸಹ ಕಲಿಸಲು ಕಷ್ಟವಾಗಬಹುದಲ್ಲವೆ..?
ಆದ್ದರಿಂದ ಬಿ.ಎಡ್ ಪದವಿ ಇಲ್ಲದಿರುವ ಎಲ್ಲ ಶಿಕ್ಷಕರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಮನೆಗೆ ಕಳಿಸುವುದೊಳ್ಳೆಯದಲ್ಲವೆ..!? ಆಗ ರಾಜ್ಯದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪ್ರಕಾಶಮಾನವಾಗಿ ಬೆಳಗತೊಡಗುತ್ತದೆಯಲ್ಲವೆ..?
ಅದಕ್ಕೆ ಮುಂಚೆ ಬಿ.ಎಡ್ ಪದವಿ ನೀಡುತ್ತಿರುವ ಕೆಲವು ವಿವಿಗಳು ಮತ್ತು ಹಲವು ಪರೀಕ್ಷಾ ಕೇಂದ್ರಗಳು ಹೇಗೆ ಪದವಿ ನೀಡುತ್ತಿವೆ, ಪರೀಕ್ಷೆ ನಡೆಸುತ್ತಿವೆ ಎಂಬುದನ್ನು ಸ್ವಲ್ಪ ಸಂಶೋಧಿಸುವುದೂ ಒಳ್ಳೆಯದು. ಇತ್ತೀಚೆಗೆ ಬಹಳಷ್ಟು ಬಿ.ಎಡ್ ಪದವೀಧರರ ಬೋಧನಾ ಸಾಮರ್ಥ್ಯ, ಕಲಿಸುವೆಡೆಗಿನ ಅವರ ಬದ್ಧತೆಗಳನ್ನೂ ಸ್ವಲ್ಪ ತನಿಖೆಗೊಳಪಡಿಸಬೇಕು.
ಇಷ್ಟಕ್ಕೂ ಮಾಜಿ ಸಿ.ಎಂ ಅವರ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಅವರ ಮೊಮ್ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗಲಿಲ್ಲವೆಂದರೆ ಅದು ಅವರ ಅರಿವಿನ ಮಿತಿ ಇರಬಹುದು ಅಷ್ಟೇ ಹೊರತು ನಾಡಿನ ಅಸಂಖ್ಯಾತ ಪ್ರಾಥಮಿಕ ಶಾಲಾ ಶಿಕ್ಷಕರು ಹೊಣೆಯಲ್ಲ.
ಒಂದು ಕಾಲದಲ್ಲಿ ಡಿ.ಎಡ್ ಕಾಲೇಜುಗಳಿಗೆ ಅವಕಾಶ ನೀಡಿ, ಡಿ.ಎಡ್ ಸರ್ಟಿಫಿಕೇಟ್‌ಗಳನ್ನು ಕಡ್ಲೆಪುರಿಯಂತೆ ಹಂಚಿದ್ದಕ್ಕೇ ಗುಣಮಟ್ಟದ ಶಿಕ್ಷಕರ ಗುಣಮಟ್ಟವೇ ಹಳ್ಳ ಹಿಡಿದದ್ದು ಇತಿಹಾಸ. ಈಗ ಬಿ.ಎಡ್ ಎನ್ನುವ ಭ್ರಮೆ ಅಥವಾ ಕೃತಕ ಒತ್ತಡ ಹೇರಿ ಇನ್ನಷ್ಟು ಅಧ್ವಾನಕ್ಕೆ ದಾರಿ ಮಾಡುವ ಹುನ್ನಾರವೇ..?
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.