ADVERTISEMENT

ಎಲ್ಲರಿಗೂ ಗೌರವವಿದೆ

ಡಾ.ಮುಮ್ತಾಜ್‌ ಅಲಿ ಖಾನ್ ಬೆಂಗಳೂರು
Published 2 ಏಪ್ರಿಲ್ 2015, 19:30 IST
Last Updated 2 ಏಪ್ರಿಲ್ 2015, 19:30 IST

ಶ್ರೀರಾಮಚಂದ್ರರನ್ನು ಕುರಿತು ಪ್ರೊ. ಕೆ.ಎಸ್. ಭಗವಾನ್‌ ಬಹು ಕಟುವಾಗಿ  ಟೀಕಿಸಿದ್ದಾರೆ. ಅವರಲ್ಲಿ ಇಂತಹ ಉಗ್ರ ಟೀಕೆ ಮಾಡಲು ವಸ್ತು ಇರಬಹುದು. ನಾನು ಈ ಬಗ್ಗೆ ಹೆಚ್ಚು ಹೇಳಲು ಸಿದ್ಧನಾಗಿಲ್ಲ. ಆದರೆ ಶ್ರೀರಾಮರನ್ನು ಗೌರವಿಸುವ ವ್ಯಕ್ತಿಗಳ ಪೈಕಿ ನಾನೂ ಒಬ್ಬ.

ಮುಸ್ಲಿಂ ಸಮಾಜದಲ್ಲಿ ಶ್ರೀರಾಮ ಬಗ್ಗೆ ಹೆಚ್ಚು ಗೌರವವಿದೆ. ಅವರು ಒಬ್ಬ ಪುರುಷೋತ್ತಮ, ಮಾರ್ಗದರ್ಶಕ, ನೀತಿ, ಧರ್ಮಕ್ಕೆ ಶರಣಾದವರು ಎಂಬ ಭಾವನೆ ಇದೆ. ಒಂದು ಲಕ್ಷ ಇಪ್ಪತ್ತಾರು ಪ್ರವಾದಿಗಳಲ್ಲಿ ಅವರೂ ಒಬ್ಬರು ಎಂಬುದು ಕೆಲವರ ಅಭಿಪ್ರಾಯ. ಆದರೆ ಇದಕ್ಕೆ ಪುರಾವೆ ಇಲ್ಲ. ಹಾಗೆ ಹೇಳುವುದು ಸರಿಯಲ್ಲ ಎಂದು ಇನ್ನು ಕೆಲವರು  ಹೇಳುತ್ತಾರೆ. ನಾನು ಈ ಬಗ್ಗೆ ಏನೂ ಹೇಳಲಾರೆ. ಇದೆಲ್ಲ ಧರ್ಮಗುರುಗಳಿಗೆ ಬಿಟ್ಟದ್ದು.

ಆದರೆ ಇಬ್ಬರು ಮಹಾವ್ಯಕ್ತಿಗಳ ಹೆಸರು ತಿಳಿಸುತ್ತೇನೆ. ಸುಪ್ರಸಿದ್ಧ ಕವಿ ಮಹಮ್ಮದ್ ಇಕ್ಬಾಲ್‌ರವರು ತಮ್ಮ ಒಂದು ಕಾವ್ಯದಲ್ಲಿ ಶ್ರೀರಾಮರ ಗುಣಗಾನ ಮಾಡಿದ್ದಾರೆ. ಆದರ್ಶ ಪುರುಷ ಎಂದಿದ್ದಾರೆ. ಟಿಪ್ಪು ಸುಲ್ತಾನರು ಶ್ರೀರಾಮರನ್ನು ಆದರದಿಂದ ಕಾಣುತ್ತಿದ್ದರು. 

ಅವರ ಉಂಗುರದ ಹಿಂದೆ ಶ್ರೀರಾಮ ಎಂದು ಕೆತ್ತಿರುವುದನ್ನು ಇತ್ತೀಚೆಗೆ ಪತ್ತೆಹಚ್ಚಲಾಗಿದೆ. ಸಂಸತ್ತು ಕಲಾಪದಲ್ಲಿ ಈ ಬಗ್ಗೆ ಚರ್ಚೆಯಾಗಿದೆ.  ಈ ಉಂಗುರವನ್ನು ಭಾರತಕ್ಕೆ ವಾಪಸ್ ತರಬೇಕೆಂದು ಸಂಸದರು ಪಕ್ಷಭೇದವಿಲ್ಲದೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಹೀಗೆ ಶ್ರೀರಾಮರ ಭಕ್ತರು ಎಲ್ಲಾ ವರ್ಗಗಳಲ್ಲಿ ಇದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.