ADVERTISEMENT

ಏಕೆ ಈ ಕೆಂಗಣ್ಣು?

ಪ್ರೊ.ಎನ್‌.ವಿ.ಅಂಬಾಮಣಿ ಮೂರ್ತಿ ಬೆಂಗಳೂರು
Published 14 ಫೆಬ್ರುವರಿ 2016, 19:30 IST
Last Updated 14 ಫೆಬ್ರುವರಿ 2016, 19:30 IST

ಇತ್ತೀಚೆಗಂತೂ ಬುದ್ಧಿಜೀವಿಗಳ ಮೇಲೆ ಕೆಂಗಣ್ಣು ಬೀರುವುದು ಹೆಚ್ಚಾಗುತ್ತಿದೆ. ಉಡುಪಿಯ ವಿಶ್ವಸಂತೋಷ ಭಾರತಿ ಸ್ವಾಮೀಜಿ ‘ಹಿಂದೂ ಧರ್ಮದಲ್ಲಿ ಬುದ್ಧಿಜೀವಿಗಳು ಕಳೆ ಇದ್ದಂತೆ. ಕೀಳದೆ ಇದ್ದರೆ ಧರ್ಮದ ಕೊಲೆ’ ಎಂದಿದ್ದಾರೆ. ಹಾಗೆಯೇ ‘ಮುಸ್ಲಿಂ ಉಗ್ರಗಾಮಿಗಳು ಮತ್ತು ಮತಾಂತರ ಮಾಡುವ ಕ್ರೈಸ್ತರೂ ಕೂಡ ಕಳೆ. ಕ್ರೈಸ್ತರಿಗೆ ಬಡವರು ಮತ್ತು ಕೆಳ ಜಾತಿಯವರನ್ನು ಮತಾಂತರ ಮಾಡುವುದು ಕರಗತವಾಗಿದೆ. ಇದು ನಿಲ್ಲಬೇಕು’ ಎಂದು ಹೇಳಿರುವುದಾಗಿ  ವರದಿಯಾಗಿದೆ (ಪ್ರ.ವಾ., ಫೆ. 8).

ಸಾವಿರಾರು ವರ್ಷಗಳಿಂದ ಬಡಬಗ್ಗರ ಶ್ರಮದ ಫಲವನ್ನು ಅನುಭವಿಸುತ್ತಾ ಅವರನ್ನು ಹೀನ ಸ್ಥಿತಿಯಲ್ಲಿ ನರಳಿಸಿದ್ದು ಹಿಂದೂ ಧರ್ಮದ ಮೇಲು ಜಾತಿಯವರು. ಹೀಗೆಯೇ ಕೆಳಜಾತಿಯವರು ಆತ್ಮಗೌರವ ಕಳೆದುಕೊಂಡು ಗುಲಾಮರಂತೆ ಅವರ ಸೇವೆಯಲ್ಲೇ ಬದುಕನ್ನು ಸವೆಸಿ, ಅಜ್ಞಾನದ ಕೂಪದಲ್ಲಿ ಮುಳುಗಿದ್ದರು. ಈಗೀಗ ಎಚ್ಚೆತ್ತು ಮೇಲೇಳುತ್ತಿದ್ದಾರೆ. ಯಥಾಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಸ್ವಾಮಿ ಅವರಿಗೆ ಅನ್ಯರ ಗೊಡವೆ ಏಕೆ?

‘ನಮ್ಮ ದೇಶದಲ್ಲಿ ಮಹಿಳೆಯರ ಅಟಾಟೋಪ ಹೆಚ್ಚಿದೆ’ ಎಂಬುದಂತೂ ಸ್ವಾಮೀಜಿ ಆಡಿದ ಅತ್ಯಂತ ಅಸಹಿಷ್ಣುತೆಯ, ಹೃದಯಹೀನ ಮಾತು.  ಪಾಪದವರಾದ ಈ ಮಹಿಳೆಯರು ಇತ್ತೀಚೆಗಷ್ಟೇ ಹೊರ ಪ್ರಪಂಚ ಕಾಣುತ್ತಿದ್ದಾರೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವದ ಛಾಪನ್ನು ಮೂಡಿಸಲು ಹೆಣಗಾಡುತ್ತಿದ್ದಾರೆ. ಇವರನ್ನು ಹಿಂದೂ ಧರ್ಮ ಯಾವ ರೀತಿ ನಡೆಸಿಕೊಂಡಿದೆ ಎಂಬುದನ್ನು ಇತಿಹಾಸದ ಪುಟಗಳು ಸ್ಪಷ್ಟವಾಗಿ ಸಾರುತ್ತಿವೆ. ಸ್ತ್ರೀ ಪಾಪಯೋನಿ, ಪ್ರತೀ ತಿಂಗಳು ಮುಟ್ಟಾಗುವುದರಿಂದ ಅಪವಿತ್ರಳು, ಸದಾಕಾಲ ಅವಲಂಬಿತಳು, ಪುರುಷನ ಭೋಗವಸ್ತು, ಅಷ್ಟೇ ಏಕೆ ಬ್ರಾಹ್ಮಣ ಜಾತಿಯ ಮಹಿಳೆಯೂ ಶೂದ್ರಳೇ, ಆದ್ದರಿಂದ ಇಡೀ ಸ್ತ್ರೀ ಸಮೂಹ ವಿದ್ಯೆ ಪಡೆಯಲು ಅನರ್ಹಳು ಮುಂತಾಗಿ ಅವಳನ್ನು ಅಧಃಪತನಕ್ಕಿಳಿಸಿ ಕರಾಳವಾಗಿ ಶೋಷಿಸಿದ್ದು ಹಿಂದೂ ಧರ್ಮ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.