ADVERTISEMENT

ಕನ್ನಡ ಬಳಸುವ ಪ್ರತಿಜ್ಞೆ ಬೇಕು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಬೆಂಗಳೂರಿನಲ್ಲಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿಹಬ್ಬದ ಉದ್ಘಾಟನೆಯ ಸಂದರ್ಭದಲ್ಲಿ  ಮುಖ್ಯಮಂತ್ರಿಗಳು ಅಮೆರಿಕದ ಸ್ವಾತಂತ್ರ್ಯದೇವಿಯ ಪ್ರತಿಮೆಯ ರೂಪದಲ್ಲಿ ಕನ್ನಡದ ತಾಯಿ ಭುವನೇಶ್ವರಿಯ ಭಾರಿ ಪ್ರಮಾಣದ ಪ್ರತಿಮೆ ಸ್ಥಾಪಿಸಲು 25 ಕೋಟಿ ರೂಪಾಯಿ ಕೊಡುವುದಾಗಿ ಪ್ರಕಟಿಸಿರುವುದಕ್ಕೆ ಅವರಿಗೆ ವಂದನೆಗಳು.

ಅಮೆರಿಕ ಹಾಗೂ ಭಾರತದಲ್ಲಿ ಸ್ವಾತಂತ್ರ್ಯ ಪಡೆಯುವ ಪೂರ್ವದಲ್ಲಿ ನಡೆದ ಸಂಘಟಿತ ಹೋರಾಟ ಹಾಗೂ ಅದರಲ್ಲಿ ಭಾಗವಹಿಸಿದ ಹೋರಾಟಗಾರರ ತ್ಯಾಗ ಬಲಿದಾನದ ನೆನಪಿಗಾಗಿ ಅಮೆರಿಕದಲ್ಲಿ ಅತೀ ಎತ್ತರವಾದ ಸ್ವಾತಂತ್ರ್ಯದೇವಿಯ ಪ್ರತಿಮೆ ಹಾಗೂ ಭಾರತದಲ್ಲಿ ವಿವಿಧ ನಾಯಕರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಅಮೆರಿಕ ದೇಶ ವಿವಿಧ ಸ್ವತಂತ್ರ ದೇಶಗಳಿಗೆ ಹಿರಿಯಣ್ಣನಂತೆ ಅವರವರಲ್ಲಿ ದ್ವೇಷ ಅಸೂಯೆಯನ್ನು ಬಿತ್ತುವ ಮೂಲಕ ಕಚ್ಚಾಟಕ್ಕೆ ಕಾರಣವಾಗಿ ಸ್ವಾತಂತ್ರ್ಯದೇವಿಯ ಆಶಯವನ್ನೇ ನಾಶ ನಾಡುತ್ತಿರುವುದನ್ನು ಕಾಣಬಹುದು.

ಅದೇ ಪ್ರಕಾರ ನಮ್ಮ ದೇಶದಲ್ಲಿ ನಾಯಕರ ಪ್ರತಿಮೆಗಳನ್ನು ಅವರ ಆದರ್ಶ ತ್ಯಾಗ ಬಲಿದಾನದ ಅರಿವು ಮಾಡಿಕೊಳ್ಳದೇ ಅವರಿಗೆ ಅಪಮಾನ ಮಾಡುವ ಮೂಲಕ ಸಾಮಾಜಿಕವಾಗಿ, ರಾಜಕೀಯವಾಗಿ ಅವರು ಹೋರಾಟದ ಫಲದಿಂದ ದೊರೆತ ಸ್ವಾತಂತ್ರ್ಯದ ದುರುಪಯೋಗ ಮಾಡಿಕೊಂಡು ಸಾಮಾಜಿಕ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದೇವೆ.

ಇಂದು ಅಮೆರಿಕದ ಸ್ವಾತಂತ್ರ್ಯದೇವಿಯ ಪ್ರತಿಮೆ ಕೇವಲ ವಿಶ್ವದ ಅತೀ ಎತ್ತರದ ಪ್ರತಿಮೆಯಾಗಿ ಮಾತ್ರ ಜನರ ಮನಸ್ಸಿನಲ್ಲಿ ಉಳಿದಿದೆ.
ಕರ್ನಾಟಕದ ಜನತೆ ಮನೆ ಮನದಲ್ಲಿ ತಾವು ಕೆಲಸ ನಿರ್ವಹಿಸುವ ತಾಣಗಳಲ್ಲಿ ರಾಜ್ಯಗಳಲ್ಲಿ ಕನ್ನಡವನ್ನು ಕಾಯಾ ವಾಚಾ ಮನಸಾ ಬಳಸುವ ಮೂಲಕ ಕನ್ನಡವನ್ನು ಉಳಿಸಿ ಬೆಳಸಿ ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿದೆ. ಈ ಸಂದರ್ಭದಲ್ಲಿ ಪ್ರತಿಮೆಗಿಂತ ಕನ್ನಡ ಉಳಿಸಿ ಬೆಳೆಸಲು ಪ್ರತಿಜ್ಞೆಯನ್ನು ಮಾಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.