ADVERTISEMENT

ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಆದ್ಯತೆ ಇರಲಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 16:10 IST
Last Updated 14 ಫೆಬ್ರುವರಿ 2011, 16:10 IST

ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಕಲಿಕೆಯ ಮಟ್ಟ ಕುಂಠಿತಗೊಂಡು 2ನೇ ಸ್ಥಾನಕ್ಕೆ ಇಳಿದಿದೆ. ಇಂಗ್ಲಿಷ್ ಕಲಿಕೆ ಮಟ್ಟ ನಂ. 1 ಸ್ಥಾನದಲ್ಲಿದೆ ಎಂದು ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯವರೇ ನಡೆಸಿದ ಅಧ್ಯಯನದಿಂದ ತಿಳಿದುಬಂದಿರುವ ವಿಷಯವನ್ನು ಗಮನಿಸಿದರೆ ನಮ್ಮ ಕನ್ನಡಿಗರಲ್ಲಿ ಮಾತೃಭಾಷೆಯ ಕಲಿಕೆಯ ಬಗ್ಗೆ ಆಸಕ್ತಿ ಕುಂಟುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಭಾಷಾ ಮಾಧ್ಯಮದ ವಿಷಯದಲ್ಲಿ ಕನ್ನಡಿಗರಿಗೇ ತಮ್ಮ ಮಕ್ಕಳಿಗೆ ಒಂದು ಹಂತದವರೆವಿಗೆ ಕನ್ನಡ ಭಾಷಾ ಮಾಧ್ಯಮದಲ್ಲಿಯೇ ಶಿಕ್ಷಣವನ್ನು ಕೊಡಿಸಬೇಕೆಂಬ ಅಭಿಮಾನವಿಲ್ಲದಿರುವುದು, ಭಾಷಾ ಬೆಳವಣಿಗೆಗೆ ಕುಂಠಿತಕ್ಕೆ ಕಾರಣವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಸರ್ಕಾರ ಶಾಲಾ ಪ್ರಾರಂಭಕ್ಕೆ ಅನುಮತಿಯನ್ನು ನೀಡುವಾಗ ಭಾಷಾ ಮಾಧ್ಯಮದ ವಿಷಯದಲ್ಲಿ ಎಲ್ಲರಿಗೂ ಸಮಾನವಾದ ನೀತಿಯನ್ನು ಏಕೆ ಪಾಲಿಸುತ್ತಿಲ್ಲ? ಅಧಿಕ ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳು ಪ್ರಾಥಮಿಕ ಹಂತದಿಂದಲೇ ಆಂಗ್ಲ ಭಾಷ ಮಾಧ್ಯಮದಲ್ಲಿಯೇ ಕಲಿಯಬೇಕೆಂಬ ಇಚ್ಛೆಯಿಂದ ಅಧಿಕ ವಂತಿಗೆಯನ್ನು ನೀಡಿ ಆಂಗ್ಲ ಭಾಷಾ ಮಾಧ್ಯಮದ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಕನ್ನಡ ಶಾಲೆಗಳಲ್ಲಿ ಪ್ರವೇಶ ಪ್ರತಿವರ್ಷ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ. ಇದರಿಂದಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಬಂದಿದೆ.

ರಾಜ್ಯದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕೆಂದು ನಮ್ಮ ಜನತಾ ಪ್ರತಿನಿಧಿಗಳಿಗೆ, ಸಾಹಿತಿಗಳಿಗೂ ಹಾಗೂ ವಿದ್ವಾಂಸರಿಗೂ ನಿಜವಾಗಿ ಕಳಕಳಿಯಿದ್ದರೆ, ಎಲ್ಲರೂ ಒಮ್ಮನಸ್ಸಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಕಡ್ಡಾಯವಾಗಿ ಒಂದು ಹಂತದವರೆವಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣವನ್ನು ನೀಡಬೇಕೆಂಬ ನಿಯಮವನ್ನು ಸರ್ಕಾರಿದಿಂದ ಜಾರಿಗೊಳಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.