ADVERTISEMENT

ಕರೀಂಖಾನ್ ಹೆಸರು ಉಳಿಸಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಕನ್ನಡದ ಸಾಹಿತಿ ಎಸ್.ಕೆ. ಕರೀಂಖಾನ್ ಅವರ ನೆನಪಿಗಾಗಿ ರಸ್ತೆಯೊಂದಕ್ಕೆ ನಾಮಕರಣ ಮಾಡುವ ಜನರ ಆಸೆಗೆ  ಪಟ್ಟಭದ್ರ ಹಿತಾಸಕ್ತರು, ಕೋಮುವಾದಿಗಳು ಅಡ್ಡಗಾಲು ಹಾಕುತ್ತಿರುವ ಸುದ್ದಿ ಕೇಳಿ ಆಶ್ಚರ್ಯವಾಯಿತು. ಧರ್ಮಾಂಧತೆ, ಜಾತೀಯತೆಯ ಬೇರು ಕಿತ್ತೆಸೆಯಲಾರದಷ್ಟು ಆಳಕ್ಕಿಳಿದಿರುವುದು ಈ ವಿವಾದದಿಂದ ಸ್ಪಷ್ಟವಾಗುತ್ತದೆ.

ಕರೀಂಖಾನ್ ನಮ್ಮ ಸಾಂಸ್ಕೃತಿಕ ಸಂಪತ್ತು. ಜನಪದ ಸಾಹಿತ್ಯದ ಜೀವನದಿಯಂತಿದ್ದ ಅವರು ಹದಿಹರೆಯದಲ್ಲಿ ಬಾಣಭಟ್ಟನ `ಕಾದಂಬರಿ~ಯನ್ನು ಕನ್ನಡಕ್ಕೆ ಅನುವಾಸಿ `ಅಭಿನವ ಬಾಣಭಟ್ಟ~ ಎಂಬ ಹೆಸರಿಗೆ ಭಾಜನರಾಗಿದ್ದವರು.
 
ತಮ್ಮ ಮೋಹಕ ಉಪನ್ಯಾಸದಿಂದ, ಸುಮಧುರ ಗಾಯನದಿಂದ  ಅವರ ಕಾಲದ ಎಲ್ಲ ವಯೋಮಾನದವರ ಹೃದಯ ಗೆದ್ದ  ಸಾತ್ವಿಕ ಜೀವಿ. ಮಾಗಡಿ ರಂಗನಾಥಸ್ವಾಮಿಯ ಕುರಿತ ಜನಪದಗೀತೆಗಳು ಹಾಗೂ ಹಲವಾರು ಕನ್ನಡ ಚಿತ್ರಗಳಿಗೆ ಸೊಗಸಾದ ಗೀತೆಗಳನ್ನು ಬರೆದು ತಮ್ಮ ಜಾತ್ಯತೀತ ನಿಲುವನ್ನು ಮೆರೆದವರು. 

ಕರೀಂಖಾನರ ಪ್ರತಿಭೆ  ಕೆಲ ವ್ಯಕ್ತಿಗಳ ವೃತ್ತಿ ಮಾತ್ಸರ್ಯದಿಂದ ಕಮರಿಹೋಯಿತು. ಅತಂತ್ರ ಜೀವನ ನಡೆಸಿದ ಕರೀಂಖಾನ್ ಅವರನ್ನು ಇತ್ತ ಮುಸಲ್ಮಾನರೂ ಕೈ ಹಿಡಿದೆತ್ತಲಿಲ್ಲ. ಹಿಂದೂಗಳ ಉಪೇಕ್ಷೆಗೂ ಸಿಕ್ಕು ನೋವು ತಿಂದರು.

ಈಗಲಾದರೂ ಸರ್ಕಾರ ಮತ್ತು ಮಹಾನಗರ ಪಾಲಿಕೆ ಅವರ ಸೇವೆಯನ್ನು ಗಮನದಲ್ಲಿ ಇಟ್ಟುಕೊಂಡು ಅವರ ಹೆಸರನ್ನು ಉಳಿಸುವ ನಿರ್ಧಾರ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.