ADVERTISEMENT

ಕಳೆದು ಹೋಗಿರುವ ಸಹಜ ನಗು

ಗುರುರಾಜ ಮಾರ್ಪಳ್ಳಿ ಉಡುಪಿ
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST

ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಸಹಜ ನಗು ಎಲ್ಲೋ ಕಳೆದುಹೋಗಿದೆ. ಕೃತಕ ಹಲ್ಲು­ಗಳನ್ನಿ­ಟ್ಟವರು ಸಹಜ ನಗು ಹೇಗೆ ನಗುವರು? ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಸೈನಿಕರು ಸದಾ ಸುಖಿಗಳು ಮತ್ತು ಸದಾ ಸುಖಿಗಳಾಗಿರುವುದು ಮುಖ್ಯ. ಅದ­ಕ್ಕಾಗಿ ಜನರನ್ನು ಉಪವಾಸ ಹಾಕ­ಲಾಗುತ್ತದೆ. ಕಾಳು­­ಗಳನ್ನು ಹೊತ್ತೊಯ್ಯುವ ಇರುವೆ­ಗಳಾದರೂ ಇಲ್ಲಿ ಬದುಕುತ್ತವೆ. ಆದರೆ ಮನು­ಷ್ಯರು ಮಾತ್ರ ಕಾಳು­ಗಳಿಗಾಗಿ ಕಾಯು­ತ್ತಾರೆ. ಐಸಿರಿಯ ಜನರಿಂದ ಲೋಕ ತುಂಬಿ­ಹೋಗಿದೆ. ಜನರು ಪ್ರೀತಿ ಬಯಸಿದರೆ ರಾಸಾಯ­ನಿಕಗಳನ್ನು ಸಿಂಪಡಿ­ಸಲಾಗುತ್ತದೆ. ನಾವು ಕಟ್ಟಿದ ಸಾಮ್ರಾಜ್ಯ­ದಲ್ಲಿ ಒಮ್ಮೊಮ್ಮೆ ಹೀಗಾಗುತ್ತದೆ. ­­­­

ಯೋಚನೆ­ಗಳಲ್ಲೇ ನಾವು ದಣಿದು ಹೋಗು­ತ್ತೇವೆ. ಕಾಡಿ­ನಲ್ಲಿರುವ ಕ್ರೂರ ಮೃಗಗಳಂತೆ ಆಡ­ಳಿತ ನಡೆ­ಸುವವರು. ಆಕಾ­ಶಕ್ಕೆ ಮುಖ ಮಾಡಿ ನವಿಲು ಕುಣಿ­ಯುತ್ತವೆ. ರಾಷ್ಟ್ರ­ಪಕ್ಷಿ ಅದು. ಅದರ ಕೂಗು ಮಾತ್ರ ಆಕ್ರಂದನದಂತೆ ಕೇಳಿಸು­ತ್ತದೆ. ಅದಕ್ಕೂ ಹಸಿ­ವಾಗಿರ­ಬೇಕು. ನಾವು ಕಟ್ಟಿದ ಸಾಮ್ರಾಜ್ಯ­ದಲ್ಲಿ ಕೇವಲ ಕೆಲವರಿಗೆ ಕೆಲಸವಿದೆ. ಕೇವಲ ಕೆಲವರಿಗೆ ಸಂಪ­ತ್ತಿದೆ. ಬೆವರಿನ ಹನಿಗಳು ಇಲ್ಲಿ ವ್ಯರ್ಥ. ವಿಧಿಯ ಮುಂದೆ ಪ್ರಯತ್ನ ನಿರರ್ಥಕ.

ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಹೀಗೆಲ್ಲ ಆಗುವುದು ಸಾಮಾನ್ಯ. ಕೆಲವು ಬಾರಿ ಹಾಗೊಮ್ಮೆ ಹೀಗೊಮ್ಮೆ ಅತ್ಯಾಚಾರಗಳಾಗಬಹುದು. ಭ್ರಷ್ಟಾ­ಚಾರ ನಡೆಯಬಹುದು. ಅನಾಚಾರಕ್ಕೆ ಆಸ್ಪದ­ವಿರಬಹುದು. ಏನೇ ಆದರೂ ಎಲ್ಲವೂ ಆಚಾರ­ಗಳು. ಆಚಾರ ಬಿಟ್ಟು ಯಾವುದೂ ನಮ್ಮ ಸಾಮ್ರಾಜ್ಯ­­ದಲ್ಲಿ ನಡೆಯದು.

ಹೆತ್ತವರೇ ಕೆಲವು ಬಾರಿ ಮಕ್ಕಳನ್ನು ಮಾರ ಬಹುದು. ಯಾರದಾ­ದರೂ ಬದುಕಿನ ಭರವಸೆ ಕಳೆದು ಹೋಗ­ಬಹುದು. ಆದರೆ ನಮ್ಮ ಸಾಮ್ರಾಜ್ಯ ದಲ್ಲಿ ಆಳು­ವವರು ತಲೆತಲಾಂತರ ಸುಖಿಗಳಾ ಗಿಯೇ ಇರ­ಬಹುದು.

ಗಡಿಗಳಲ್ಲಿ ಯುದ್ಧ ಅನ್ನುವ ಕ್ರೀಡೆಗೆ ಅಂತರ­ರಾಷ್ಟ್ರೀಯ ಪ್ರೋತ್ಸಾಹವಿದೆ. ಅದನ್ನು ಟಿ.ವಿ.­ಗಳಲ್ಲಿ ನೋಡಿ ಆನಂದಿಸುವುದಕ್ಕೆ ಆಸ್ಪದ­ವಿದೆ. ಜನ ಹಾಯಾಗಿ­ರಬಹುದು.

ಕೆಲವು ಬಾರಿ ದಂಗೆ ಏಳ­ಬಹುದು, ದಂಗೆಗಳನ್ನು ದಮನಿಸಲು ಸೈನ್ಯದ ಸೇವೆ ಸದಾ ಸಿದ್ಧವಿದೆ. ಆದರೆ ಇದೆಲ್ಲ ನಾವು ಕಟ್ಟಿದ ಸಾಮ್ರಾಜ್ಯ­ದಲ್ಲಿ ಸಹಜ ಸಾಮಾನ್ಯ.

ಜನ ಕಣ್ಣಿದ್ದೂ ಕುರುಡ­ರಂತೆ ಬುದ್ಧಿ­ಯಿದ್ದೂ ದಡ್ಡರಂತೆ ಬಾಳಬಹುದು ನಾವು ಕಟ್ಟಿದ ಸಾಮ್ರಾಜ್ಯದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.