ADVERTISEMENT

ಕುಂದುಕೊರತೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಶೌಚಾಲಯ ನಿರ್ಮಿಸಿ
ಸಿದ್ದಯ್ಯ ರಸ್ತೆ, ಊರ್ವಶಿ ಚಿತ್ರಮಂದಿರದ ಪಾದಚಾರಿ ರಸ್ತೆಯಲ್ಲಿ ಆಜುಬಾಜಿನ ನಿವಾಸಿಗಳು ಪ್ರತಿನಿತ್ಯ ಪಾಯಿಖಾನೆಗೆ ಹೋಗುತ್ತಿದ್ದಾರೆ. ಇದರಿಂದ ಪಾದಚಾರಿ ರಸ್ತೆಯಲ್ಲಿ ಸಂಚರಿಸಲು ಬಹಳ ತೊಂದರೆಯಾಗುತ್ತಿರುತ್ತದೆ. ಅಲ್ಲದೆ ವಾತಾವರಣ ಕಲುಷಿತಗೊಂಡು ಮಾರಕ ಸಾಂಕ್ರಾಮಿಕ ರೋಗಗಳು ಬರುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಇಲ್ಲಿನ ನಿವಾಸಿಗಳಿಗೆ ಸಾರ್ವಜನಿಕ ಶೌಚಾಲಯ ಕಟ್ಟಿಸಿಕೊಡಬೇಕು ಹಾಗೂ ಇನ್ನು ಮುಂದೆ ಪಾದಚಾರಿ ಮಾರ್ಗದಲ್ಲಿ ಪಾಯಿಖಾನೆಗೆ ಹೋಗುವುದನ್ನು ತಡೆಗಟ್ಟಿ ಸಂಚರಿಸಲು ಸುಗಮ ವ್ಯವಸ್ಥೆ ಮಾಡಬೇಕು ಎಂದು ಬಿಬಿಎಂಪಿ ಆರೋಗ್ಯ ಇಲಾಖೆಯವರಲ್ಲಿ ಮನವಿ.
- ಸುಜಾತ ಎಸ್. ರಾಯುಡು

ಅಪಾಯದ ರೆಂಬೆ ಕೊಂಬೆಗಳು

ಬಾಪೂಜಿನಗರ ನಂ. 44, 3ನೇ ಬಿ ಮುಖ್ಯ ರಸ್ತೆಯ ಎದುರುಗಡೆ ಇರುವ ಮರವೊಂದು ಅತಿ ಎತ್ತರಕ್ಕೆ ಬೆಳೆದಿರುತ್ತದೆ. ಆದರೆ ಇದು ಯಾವಾಗ ಬೇಕಾದರೂ ಬೀಳುವ ಸಂಭವ ಹೆಚ್ಚು. ಇದು ಅಕ್ಕಪಕ್ಕದ ಮನೆಗಳ ಶೀಟ್ ಮೇಲೆ ಬಿದ್ದರೆ ಅಪಾಯಕಾರಿ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಈ ಮರದ ರೆಂಬೆ, ಕೊಂಬೆಗಳನ್ನು ಕತ್ತರಿಸಲು ಕ್ರಮ ಕೈಗೊಂಡು ಮುಂದೆ ಆಗುವ ಅಪಾಯವನ್ನು ತಪ್ಪಿಸಬೇಕು.
- ಮಂಜುನಾಥ. ಡಿ.

ಬೀದಿ ಕಾಮಣ್ಣರ ಕಾಟ ತಪ್ಪಿಸಿ

ಜೆ. ಪಿ. ನಗರ 4ನೇ ಹಂತ 16 ಮತ್ತು 17ನೇ ಕ್ರಾಸಿನ ಸರ್ಕಲ್ ಹತ್ತಿರ, ಬೇಕರಿ ಹತ್ತಿರ, ರಿಯಲ್ ಎಸ್ಟೇಟ್ ಬಳಿ ಬೀದಿ ಕಾಮಣ್ಣರ ಕಾಟ ಶುರುವಾಗಿದೆ. ಇವರು ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳು ಮತ್ತು ಕಾಲ್‌ಸೆಂಟರ್ ಹುಡುಗಿಯರನ್ನು ಚುಡಾಯಿಸುತ್ತಾರೆ. ಕೇಳಲು ಹೋದರೆ ಸಿಗರೇಟ್ ಹೊಗೆಯನ್ನು ಮುಖಕ್ಕೆ ಬೀರುತ್ತಾರೆ. ಇಲ್ಲಿರುವ ಕೆಲ ರಿಯಲ್ ಎಸ್ಟೇಟ್ ದಂಧೆ ನಡೆಸುವರ ಕಾಟದಿಂದ ಮನೆ ಮಾಲಿಕರು ಹಾಗೂ ಬಾಡಿಗೆದಾರರು ಬೇಸತ್ತು ಹೋಗಿರುತ್ತಾರೆ. ಬಲವಂತವಾಗಿ ಕಮೀಷನ್ ವಸೂಲಿ ಮಾಡುತ್ತಾರೆ. ಹೊರ ರಾಜ್ಯದ ಹುಡುಗರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಾರೆ.
ಹೊರ ರಾಜ್ಯದ ಹುಡುಗರು, ಹುಡುಗಿಯರು ಈ ಬಡಾವಣೆಯಲ್ಲಿ ಜಾಸ್ತಿ ಇರುವುದರಿಂದ ಹಲವು ಅನೈತಿಕ ಚಟುವಟಿಕೆಗಳು ಇಲ್ಲಿ ಹೆಚ್ಚು. ಇಲ್ಲಿ ಯಾವುದೇ ಬೀಟ್ ಪೊಲೀಸರು ಗಸ್ತು ತಿರುಗುವುದಿಲ್ಲ. ರಾತ್ರಿಯಾದರೆ ಹುಡುಗರ ಪುಂಡಾಟ ಜಾಸ್ತಿಯಾಗಿದೆ. ಮೆಡಿಕಲ್ ಸ್ಟೋರ್, ಬೇಕರಿ ಹತ್ತಿರ, ಅಂಗಡಿಗಳ ಹತ್ತಿರ ಬೀದಿ ಕಾಮಣ್ಣರದೇ ದರ್ಬಾರು. ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರು ಈ ಬಡಾವಣೆಗೆ ಮಫ್ತಿ ಪೊಲೀಸರನ್ನು ನಿಯೋಜಿಸಿ ಅಕ್ರಮಗಳನ್ನು ತಪ್ಪಿಸಿ ಬಡಾವಣೆಯ ಹಿರಿಯ ನಾಗರಿಕರಿಗೆ, ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ವಿನಂತಿ.
- ವಿನುತಾ ಕೆ

315 ಕೆ ಪ್ರಯಾಣದ ಬವಣೆ

ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರ್ಕೆಟ್ ಮತ್ತು ಶಿವಾಜಿನಗರಗಳಿಂದ ಎನ್‌ಜಿಇಎಫ್ ಮಾರ್ಗವಾಗಿ ರಾಮಮೂರ್ತಿನಗರ, ಕೆಆರ್‌ಪುರ, ಅಕ್ಷಯನಗರ, ಶಾಂತಿಕಾಲನಿ ಮೊದಲಾದ ಕಡೆಗಳಲ್ಲಿ ಸಾಗುವ ಕೆಲವೇ ಬಸ್‌ಗಳು ಸದಾನಂದನಗರ, ಕಸ್ತೂರಿನಗರ ಬಡಾವಣೆಗಳಿಗೆ ಬಸ್ ಸೌಲಭ್ಯ ಒದಗಿಸುತ್ತಿವೆ. ಆದರೆ ಅಂಥ ಬಸ್‌ಗಳಲ್ಲಿನ ಕೆಲವು ಸಿಬ್ಬಂದಿಯ ಉದ್ಧಟತನದ ವರ್ತನೆ ಬಸ್ ಪ್ರಯಾಣವೇ ಬೇಡ ಎನಿಸುವಂತಿದೆ. ಫೆ.5 ರಂದು ಮಧ್ಯಾಹ್ನ ಶಾಂತಿಕಾಲನಿಯ 315 ಪಿ (ಕೆ ಎ 01- ಎಫ್ ಎ-969) ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಬ್ಬಂದಿಯ ಉದ್ಧಟತನದ ನಡವಳಿಕೆ ಮೇರೆ ಮೀರಿದಂತಿತ್ತು. ಲೈಫ್ ಸ್ಟೈಲ್ (ಸೆಕ್ರೆಡ್ ಹಾರ್ಟ್ ಚರ್ಚ್) ಸ್ಟಾಪ್‌ನಲ್ಲಿ ಬಸ್ ನಿಲ್ಲಿಸದ ಸಿಬ್ಬಂದಿ ಟ್ರಾಫಿಕ್ ಸಿಗ್ನಲ್ ಬಿದ್ದಾಗ ‘ಬಸ್ಸಿಂದ ಇಳಿಯಿರಿ’ ಎಂದು ಪ್ರಯಾಣಿಕರಿಗೆ ಜೋರು ಮಾಡುತ್ತಿದ್ದರು. ‘ಹಿಂದೆ ಬರುವ ವಾಹನ ಡಿಕ್ಕಿ ಹೊಡೆದರೆ’ ಎಂಬ  ಆತಂಕದ ಉದ್ಗಾರ ಪ್ರಯಾಣಿಕರದ್ದಾದರೆ, ಡ್ರೈವರ್ ಮತ್ತು ಕಂಡಕ್ಟರ್ ‘ಸಾಯಿರಿ ನಾವೇನು ಮಾಡುವುದು’ ಎಂದು ಕೆಳಗಿಳಿಯಲು ಅವಸರಿಸುತ್ತಾ ದಬಾಯಿಸುತ್ತಿದ್ದರು.

ಹಲಸೂರಿನ ಆದರ್ಶ ಬಸ್ ನಿಲುಗಡೆಯಲ್ಲಿ ಸಾಮಾನ್ಯವಾಗಿ ಬಸ್ಸುಗಳು ಸ್ವಲ್ಪ ಸಮಯವೂ ನಿಲ್ಲದೇ ದಾರಿ ಸಿಕ್ಕತ್ತ ಮುಂದೆ ಹೋಗುವುದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಅಲ್ಲಿ ಬಸ್ ಹತ್ತುವುದೇ ದುಸ್ತರವಾಗಿದೆ. ನಿಗದಿತ ನಿಲುಗಡೆಯಲ್ಲಿ ಬಸ್ ನಿಲ್ಲಿಸದಿರುವುದರಿಂದ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಬಸ್ ಇಳಿಯಬೇಕು ಮತ್ತು ಹತ್ತಬೇಕು. ನಿಗದಿತ ನಿಲುಗಡೆಯಲ್ಲಿ ಬಸ್ ನಿಲ್ಲಿಸದ, ಈ ರೀತಿಯ ಉದ್ಧಟತನದ ವರ್ತನೆಯ ಬಸ್ ಸಿಬ್ಬಂದಿಗಳಿಂದ  ಅಬ್ಬರದ ‘ಬಸ್ ದಿನ’ದ ಆಚರಣೆಗೆ ಯಾವುದೇ ಅರ್ಥ ಬರುವುದಿಲ್ಲ. ಸಂಬಂಧಪಟ್ಟವರು ಬಸ್ ಸಿಬ್ಬಂದಿಗೆ ಸೌಜನ್ಯದ ನಡವಳಿಕೆ ಹೇಳಿಕೊಟ್ಟರೆ ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣಿಸಲು ಅನುಕೂಲವಾದೀತು.
- ಅವಿನಾಶ ಎಸ್.ರಮೇಶ್ ಕೆ ಮತ್ತು ಇತರರು

ಹೆಚ್ಚು ಬಸ್ ಓಡಿಸಿ
ಕುಂದು ಕೊರತೆಯಲ್ಲಿ ನೊಂದ ವಿದ್ಯಾರ್ಥಿಗಳು ಬರೆದಿರುವ ‘ಮಲ್ಲೇಶ್ವರಂ ಕಡೆಗೆ ಬಸ್ ಓಡಿಸಿ’ ಕೋರಿಕೆ ಸರಿಯಾಗಿದೆ. ನಾನು ಪ್ರತಿ ದಿನ ಮಹಾಲಕ್ಷ್ಮಿ ಲೇ ಔಟ್‌ನಿಂದ ಮಲ್ಲೇಶ್ವರಂ ಕಡೆಗೆ ಹೋಗಿ ಬರುತ್ತಿರುವ ಪ್ರಯಾಣಿಕ. ಹೀಗಾಗಿ ಅವರ ಸಮಸ್ಯೆ ಎಲ್ಲರದೂ ಹೌದು. ಮಹಾಲಕ್ಷ್ಮಿ ಲೇ ಔಟ್ ಹಾಗೂ ಅದರ ಹತ್ತಿರವಿರುವ ನಂದಿನಿ ಲೇ ಔಟ್‌ನಿಂದ ಮಲ್ಲೇಶ್ವರ ಮಾರ್ಗದಲ್ಲಿ ಹೋಗುವ - ಬರುವ 79 ಸಿ, 79 ಡಿ, 79 ಇ, 188, 189 (ಈ ವಿಷಯದಲ್ಲಿ ನೊಂದ ವಿದ್ಯಾರ್ಥಿಗಳು ಸೂಚಿಸಿರುವ ಮಾರ್ಗ ಸಂಖ್ಯೆ 79 ಮಾತ್ರ; ವಾಸ್ತವವಾಗಿ ಈ ಸಂಖ್ಯೆ ಹೊಂದಿರುವ ಬಸ್ ಆರಂಭವಾಗುವುದು ರಾಜಾಜಿನಗರದ ಒಂದನೆಯ ಬ್ಲಾಕ್‌ನಿಂದ) ಬಸ್‌ಗಳಲ್ಲಿ ಸೀಟ್ ಸಿಕ್ಕರೆ ದೊಡ್ಡ ಪುಣ್ಯ. ಆದ್ದರಿಂದ ಬಿಎಂಟಿಸಿಯವರು ಮಹಾಲಕ್ಷ್ಮಿ ಲೇ ಔಟ್ ಹಾಗೂ ನಂದಿನಿ ಲೇ ಔಟ್‌ಗಳಿಂದ ಮಲ್ಲೇಶ್ವರಕ್ಕೆ ಹೋಗಲು, ಅಲ್ಲಿಂದ ಬರಲು ಅನುಕೂಲವಾಗುವಂತೆ ಹೆಚ್ಚು ಸಂಖ್ಯೆಯ ಬಸ್ ಸಂಖ್ಯೆಗಳನ್ನು ಬಿಡಲು ಕೋರಿಕೆ.
-ಜಯಸಿಂಹ ಎಸ್

ಹಿರಿಯರ ಗುರುತು ಚೀಟಿ

ನನಗೆ 60 ವರ್ಷ ಆಗಿದೆ. ನನಗೆ ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಕೊಟ್ಟಿರುತ್ತಾರೆ. ಆದರೆ ಬಿಎಂಟಿಸಿಯ ಕೆಲವು ನಿರ್ವಾಹಕರು ‘ನಿಮಗೆ 65 ವರ್ಷ ಆಗಿರಬೇಕು’ ಎಂದು ತಿಳಿಸಿ ರಿಯಾಯ್ತಿ ದರದ ಟಿಕೇಟ್‌ಗಳನ್ನು ಕೊಡಲು ನಿರಾಕರಿಸುತ್ತಾರೆ (ಎಲ್ಲ ನಿರ್ವಾಹಕರು ಅಲ್ಲ). ಸರ್ಕಾರದಿಂದ ಗುರುತಿನ ಚೀಟಿ ಕೊಟ್ಟಿದ್ದರೂ ಕೂಡ ಮಾನ್ಯ ಮಾಡುವುದಿಲ್ಲ. ನೀವು ಪೂರ್ತಿ ಹಣ ಕೊಟ್ಟು ಟಿಕೆಟ್ ತೆಗೆದುಕೊಳ್ಳಿ ಎಂದು ತಿಳಿಸುತ್ತಾರೆ.

ಉದಾ: ಮಾರ್ಗ ಸಂಖ್ಯೆ ಟಿ - 12, 36 ಎಫ್, 36, 96 ಎ, 96, 12 ಹಾಗೂ ಇನ್ನಿತರ ಬಸ್ಸಿನ ಅನೇಕ ನಿರ್ವಾಹಕರಿಂದ ನನಗೆ ಈ ಅನುಭವವಾಗಿದೆ. ಆದ್ದರಿಂದ ಹಿರಿಯ ನಾಗರಿಕರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್ ಇದ್ದರೆ ಅವರಿಗೆ ರಿಯಾಯ್ತಿ ದರದ ಟಿಕೆಟ್‌ಗಳನ್ನು ನೀಡಬೇಕೆಂದು ಸಂಸ್ಥೆಯ ಎಲ್ಲಾ ನಿರ್ವಾಹಕರಿಗೂ ಸೂಚಿಸಲು ಬಿಎಂಟಿಸಿಗೆ ಮನವಿ.
- ಆರ್. ಎನ್. ಸುಬ್ಬರಾವ್

ಚೇಂಬರ್ ಸ್ವಚ್ಛಗೊಳಿಸಿ

ವಾರ್ಡ್ ನಂ. 71ನೇ ಈಜಿಪುರದ ಮುಖ್ಯ ರಸ್ತೆ (ಸ್ನೇಹ ಬೇಕರಿ ಪಕ್ಕ) 1ನೇ ಕ್ರಾಸ್‌ನಲ್ಲಿ ಸುಮಾರು ಹತ್ತು-ಹದಿನೈದು ದಿನಗಳಿಂದ ಒಳಚರಂಡಿ ಚೇಂಬರ್ ಕಟ್ಟಿಕೊಂಡು ಹೊಲಸು ನೀರು ರಸ್ತೆಯಲ್ಲೆಲ್ಲಾ ಹರಿಯುತ್ತಿದೆ. ಈ ಬಡಾವಣೆಯ ಮನೆಗಳ ಮುಂದೆಲ್ಲಾ ಈ ತ್ಯಾಜ್ಯನೀರಿನ ಕಿರಿಕಿರಿ, ದುರ್ನಾತ. ಇಲ್ಲಿನ ಒಳಚರಂಡಿ ಪೈಪುಗಳ ವ್ಯಾಸವು ಚಿಕ್ಕದಾಗಿದ್ದು ತುಂಬಾ ಹಳೆಯದಾಗಿದೆ, ಆದುದರಿಂದ ತ್ಯಾಜ್ಯ  ನೀರು ಸರಾಗವಾಗಿ ಹರಿಯದೆ ಆಗಾಗ ಕಟ್ಟಿಕೊಳ್ಳುತ್ತದೆ. ಈ ರಸ್ತೆಗೆ ದೊಡ್ಡ ಪೈಪುಗಳನ್ನು ಅಳವಡಿಸಬೇಕೆಂದು ಈ ಹಿಂದೆ ಜಲಮಂಡಳಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದರೆ, ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈಗಲೂ ಚೇಂಬರ್ ಕಟ್ಟಿಕೊಂಡಿರುವ ಬಗ್ಗೆ ಸಂಬಂಧಿಸಿದ ಕಚೇರಿಗೆ ದೂರು ನೀಡಲಾಗಿದೆ. ಆದರೆ ಯಾರೂ ಗಮನ ಹರಿಸಿಲ್ಲ. ಈಗಲಾದರೂ ವಿಳಂಬ ಮಾಡದೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ ತೊಂದರೆ ನಿವಾರಿಸಬೇಕೆಂದು ಮನವಿ.
-ನೊಂದ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.