ADVERTISEMENT

ಕೆಪಿಎಸ್‌ಸಿ: ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮರುಚಿಂತಿಸಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕ/ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ದಿನಾಂಕ.19-06-2011ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಉಲ್ಲೇಖದ ಸೂಚನಾ ಪತ್ರ ರವಾನಿಸಿ, ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲನೆಗೆ ಕರೆದಿರುವುದು ಸರಿಯಷ್ಟೆ.

ಈ ಸೂಚನಾಪತ್ರದ ಅಂಕಣ 11ರಲ್ಲಿ ಈಗಾಗಲೇ ಸರ್ಕಾರಿ ಸೇವೆಯಲ್ಲಿರುವವರು ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದು ಹಾಜರುಪಡಿಸಬೇಕೆಂದು ಸೂಚಿಸಿದೆ. ಇದರೊಂದಿಗೆ ಈ ನಿರಾಕ್ಷೇಪಣಾ ಪ್ರಮಾಣಪತ್ರದಲ್ಲಿ ಅಭ್ಯರ್ಥಿಯು ಸೇವೆಗೆ ಸೇರಿದ ದಿನಾಂಕ ಅಥವಾ ಸೇವೆ ಸಲ್ಲಿಸುತ್ತಿರುವ ಅವಧಿಯ ಉಲ್ಲೇಖವಿರಬೇಕೆಂದು ಹಾಗೂ ಈ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ.16-03-2011ದೊಳಗೆ ಪಡೆದಿರಬೇಕೆಂದು ನಮೂದಿಸಿದೆ.

ಆದರೆ ಆಯೋಗವು ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಸರ್ಕಾರಿ ಸೇವೆಯಲ್ಲಿರುವವರು ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದು ಇಟ್ಟುಕೊಂಡಿರತಕ್ಕದ್ದು ಮತ್ತು ಪರಿಶೀಲನಾ ಸಮಯದಲ್ಲಿ ಹಾಜರು ಪಡಿಸತಕ್ಕದ್ದು ಎಂದು ತಿಳಿಸಲಾಗಿತ್ತೇ ವಿನಾ ಇದರೊಂದಿಗೆ ನಿರಕ್ಷೇಪಣಾ ಪ್ರಮಾಣಪತ್ರದ ಯಾವುದೇ ಮಾದರಿಯನ್ನು ನೀಡಿರಲಿಲ್ಲ.

 ಅದರಂತೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಸಾಧಾರಣವಾಗಿ ಸೇವೆ ಸಲ್ಲಿಸುತ್ತಿರುವ ಇಲಾಖೆಯ ನೇಮಕಾತಿ ಪ್ರಾಧಿಕಾರವು ನೀಡಿರುವ ನಿರಕ್ಷೇಪಣಾ ಪ್ರಮಾಣಪತ್ರ (ಸೇವೆಗೆ ಸೇರಿದ ದಿನಾಂಕ ಮತ್ತು ಸೇವಾವಧಿ ರಹಿತ ) ಪಡೆದುಕೊಂಡಿದ್ದೆೀವೆ. ಈಗ ಏಕಾಏಕಿ ಪ್ರಮಾಣಪತ್ರದಲ್ಲಿ ಸೇವೆ ಸೇರಿದ ದಿನಾಂಕ ಅಥವಾ ಸೇವಾ ಅವಧಿಯ ಉಲ್ಲೇಖವಿರಬೇಕೆಂದು ಕೇಳಿರುವುದು ಅಲ್ಲದೆ ಈ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕ:16-03-2011ರೊಳಗೆ ಪಡೆದಿರಬೇಕೆಂದು ಈ ಅವಧಿಯಲ್ಲಿ ಕೇಳುತ್ತಿರುವುದು ಅರ್ಥಹೀನ.

ಯಾಕೆಂದರೆ ಯಾವ ಅಭ್ಯರ್ಥಿಯು ಭೂತಕಾಲಕ್ಕೆ ಪಯಣಿಸಿ ಪ್ರಮಾಣಪತ್ರಗಳನ್ನು ತರಲು ಸಾಧ್ಯವಿಲ್ಲ. ಅಲ್ಲದೆ ಸದರಿ ವಿವರವು ಅಭ್ಯರ್ಥಿಯ ಸೇವಾ ಪುಸ್ತಕದಲ್ಲಿ ದಾಖಲಾಗಿರುತ್ತದೆ ಎಂಬುದು ಆಯೋಗಕ್ಕೆ ತಿಳಿದಿಲ್ಲವೆ. ಈ ಸೂಚನೆ ಬಗ್ಗೆ ಆಯೋಗ ಮರುಪರಿಶೀಲಿಸಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.