ADVERTISEMENT

ಕೋಮುವಾದ ರೂಪುಗೊಂಡ ಬಗೆ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಕೋಮುವಾದ ರೂಪುಗೊಂಡ ಬಗೆ...
ಕೋಮುವಾದ ರೂಪುಗೊಂಡ ಬಗೆ...   

‘ಕರಾವಳಿ ಕರ್ನಾಟಕವೆಂಬ ಭಾವಿಸಿದ ಜನಪದ’  (ಪ್ರ.ವಾ., ಸೆ. 27) ಎಂಬ ನಮ್ಮ ಲೇಖನಕ್ಕೆ ಬಂದ ಪ್ರತಿಕ್ರಿಯೆಗೆ ಕೆಲವು ಸ್ಪಷ್ಟನೆಗಳು. ದಕ್ಷಿಣ ಕನ್ನಡದ ನಾಗರಿಕ ಸಮಾಜವು ಕೋಮುವಾದಿಯಾಗಿ ಪರಿವರ್ತಿತವಾಗಿದೆ ಎನ್ನುವ ನಮ್ಮ ನಿಲುವನ್ನು ಆಕ್ಷೇಪಿಸಿದವರು ನಾವು ಇಡಿಯ ಜನ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದೇವೆ ಎಂದಿದ್ದಾರೆ.

ಈ ಆಕ್ಷೇಪ ನಾಗರಿಕ ಸಮಾಜದ ಕುರಿತ ಅಸ್ಪಷ್ಟತೆಯಿಂದ ಬಂದಿದೆ. ನಾಗರಿಕ ಸಮಾಜವೆಂದರೆ ಅದು ಇಡಿಯ ಜನಸಮುದಾಯವಲ್ಲ. ಈ ಕುರಿತು ಅಧ್ಯಯನ ನಡೆಸಿದ ಅನೇಕ ಚಿಂತಕರ ಪ್ರಕಾರ; ನಾಗರಿಕ ಸಮಾಜವೆಂದರೆ ಸಂಘಟಿತಗೊಂಡ, ಸಮಾಜದ ಆಯಕಟ್ಟಿನ ಜಾಗಗಳಲ್ಲಿ ವ್ಯವಹರಿಸುವ, ಪರಿಣಾಮಕಾರಿಯಾಗಿ ತನ್ನನ್ನು ತಾನು ಪ್ರಕಟಗೊಳಿಸುವ ಮತ್ತು ಅಧಿಕಾರ ಕೇಂದ್ರಗಳಿಗೆ ಸಮೀಪವರ್ತಿಯಾಗಿರುವ ಹಾಗೂ ಅವುಗಳಿಂದ ಲಾಭ ಪಡೆಯುವ ಒಂದು ನಿರ್ದಿಷ್ಟ ಸ್ತರ. ಅದು ಕೋಮುವಾದಿಯಾಗಿ ಪರಿವರ್ತಿತವಾಗಿದೆ ಎಂದರೆ ಇಡಿಯ ಜನಸಮುದಾಯವೇ ಕೋಮುವಾದಿಯಾಗಿದೆ ಎಂದಂತಲ್ಲ. ಕೋಮುವಾದವೆನ್ನುವುದು ಹೊರಗಿನ ವಿದ್ಯಮಾನವಾಗಿರದೆ ನಮ್ಮ ಸಮಾಜ ಮತ್ತು ರಾಜಕಾರಣಗಳಲ್ಲಿ ಹಾಸುಹೊಕ್ಕಂತಿರುವ ಸಂಗತಿಯಾಗಿದೆ ಎನ್ನುವುದನ್ನು ಸೂಚಿಸುವ ಉದ್ದೇಶದಿಂದ ಆ ಮಾತುಗಳನ್ನು ಬರೆಯಲಾಗಿದೆ.

ಇಂದು ನಾವು ಎದುರಿಸುವ ಅನೇಕ ಸಮಸ್ಯೆಗಳು ಹೊರಗಿನ ಒತ್ತಡಗಳಿಂದ ಸೃಷ್ಟಿಯಾದದ್ದು ಮಾತ್ರವಲ್ಲದೇ ಆಂತರಿಕ ವಿರೋಧಾಭಾಸಗಳಿಂದಲೂ ರೂಪುಗೊಂಡಿವೆ. ಇದನ್ನು ಸಾರ್ತ್ರೆ, ‘ಹಿಟ್ಲರನಿಗೆ ನಾನು ಜವಾಬ್ದಾರ’ ಎನ್ನುವ ಉದ್ಗಾರದಲ್ಲಿ ನಮಗೆ ತಿಳಿಹೇಳುತ್ತಾರೆ. ಆಶೀಶ್‌ ನಂದಿ, ‘ಗಾಂಧಿ ಹತ್ಯೆಗಾಗಿ ಈ ದೇಶದ ನಗರವಾಸಿ ಮಧ್ಯಮ ವರ್ಗದ ಜನ ಸಮುದಾಯ ಹಸಿದಿತ್ತು’ ಎನ್ನುವ ಮೂಲಕ ನಮಗೆ ಮನದಟ್ಟು ಮಾಡುತ್ತಾರೆ. ಸಾಹಿತಿ ವಿ. ಸೀತಾರಾಮಯ್ಯ ‘ಗಾಂಧಿಯನ್ನು ಕೊಂದ ಸರ್ಪದ ವಿಷಪೂರಿತ ದೇಹ ನಾವು. ಗೋಡ್ಸೆ ಅದರ ಹಲ್ಲು ಮಾತ್ರ ’ ಎಂದು ಹೇಳುವ ಮೂಲಕ ಕೆಡುಕಿನ ಮರ್ಮವನ್ನು ನಮಗೆ ತಿಳಿ ಹೇಳುತ್ತಾರೆ. ಹೆಚ್ಚು ಕಮ್ಮಿ ಇದೇ ಅರ್ಥದಲ್ಲಿ ಕೋಮುವಾದ ನಮ್ಮೊಳಗೆ ರೂಪುಗೊಂಡ ವಿದ್ಯಮಾನವೆಂದು ತಿಳಿಸಲು ನಾಗರಿಕ ಸಮಾಜ ಕೋಮುವಾದಿಯಾಗಿ ಪರಿವರ್ತಿತವಾಗಿದೆ ಎಂದು ನಾವು ಬರೆದಿದ್ದೇವೆ.

ADVERTISEMENT

ನಮ್ಮ ಲೇಖನದಲ್ಲಿ ಕೋಮುವಾದ ಯಾವಾಗ ಹುಟ್ಟಿತು, ಅದು ಆಧುನಿಕ ವಿದ್ಯಮಾನವೇ ಅಥವಾ ಆಧುನಿಕಪೂರ್ವದ್ದೇ? ವಸಾಹತುಶಾಹಿ ಮತ್ತು ವಸಾಹತೋತ್ತರ ಭಾರತದಲ್ಲಿ ಅದು ಬಲಗೊಂಡ ಕ್ರಮಗಳು ಹೇಗೆ... ಇತ್ಯಾದಿ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತಿಲ್ಲ. ಆದ್ದರಿಂದ ಚಿಂತಕರಾದ ಅಸ್ಗರ್ ಅಲಿ ಇಂಜಿನಿಯರ್‌ರವರ ನಾಮಸ್ಮರಣೆ ಮಾಡಿ ಶ್ರೀಪಾದ ಭಟ್ಟರು ನಮ್ಮ ಮೇಲೆ ಗದಾಪ್ರಹಾರ ಮಾಡಬೇಕಾಗಿಲ್ಲ. ಇನ್ನು ದಕ್ಷಿಣ ಕನ್ನಡದ ಶೂದ್ರ ಸಂಪ್ರದಾಯಗಳ ದೈವಗಳ ಆರಾಧನಾ ಕ್ರಮಗಳ ಪಲ್ಲಟಗಳ ಕುರಿತು ಸಾಂಸ್ಕೃತಿಕ ಮಾನವಶಾಸ್ತ್ರದ ನೆಲೆಯಲ್ಲಿ (ಕಲ್ಚರಲ್ ಆಂಥ್ರೊಪಾಲಜಿ) ಅಧ್ಯಯನಗಳು ನಡೆಯುತ್ತಿವೆ ಮತ್ತು ನಡೆಯಬೇಕಾಗಿದೆ.

–ರಾಜಾರಾಮ ತೋಳ್ಪಾಡಿ
–ನಿತ್ಯಾನಂದ ಬಿ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.