ADVERTISEMENT

ಖಿನ್ನತೆ ಗುರುತಿಸಿ

ಡಾ.ಸಿ.ಆರ್.ಚಂದ್ರಶೇಖರ್
Published 14 ಜುಲೈ 2016, 20:02 IST
Last Updated 14 ಜುಲೈ 2016, 20:02 IST

ಅವಮಾನ ಮತ್ತು ಆತ್ಮಹತ್ಯೆಯನ್ನು ನಾಗೇಶ ಹೆಗಡೆ ಅವರು ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಆಧುನಿಕ ಮನಶಾಸ್ತ್ರದ ಪಿತಾಮಹ ಸಿಗ್ಮಂಡ್‌ ಫ್ರಾಯ್ಡ್‌ನ ಪ್ರಕಾರ, ಪ್ರತಿಯೊಬ್ಬರಲ್ಲೂ ಬದುಕುವ ತುಡಿತ ಇರುವಂತೆಯೇ ಸಾಯುವ ತುಡಿತವೂ ಇರುತ್ತದೆ.

ತೀವ್ರ ಕಷ್ಟ, ನಷ್ಟ, ಸೋಲು, ನಿರಾಶೆ, ಅವಮಾನಗಳಾದಾಗ ಬದುಕುವ ತುಡಿತ ತಗ್ಗಿ ಸಾಯುವ ತುಡಿತ ತೀವ್ರವಾಗುತ್ತದೆ. ಈ ತುಡಿತಕ್ಕೆ ಕುಮ್ಮಕ್ಕು ಕೊಡುವುದು ಖಿನ್ನತೆ.

ಮೆದುಳಿನಲ್ಲಿ ಡೋಪಮಿನ್‌, ಸೆರೋಟೊನಿನ್‌ ಎಂಬ ರಾಸಾಯನಿಕ ನರವಾಹಕಗಳ ಪ್ರಮಾಣ ತಗ್ಗಿ ಖಿನ್ನತೆ ಬರುತ್ತದೆ. ಅದು ನಮ್ಮ ಬದುಕುವ ಛಲವನ್ನೇ ಚಿವುಟಿ ಹಾಕುತ್ತದೆ.
ಎಲ್ಲ ಸಮಸ್ಯೆ, ಸಂಕಟಗಳಿಗೆ ಸಾವೇ ಪರಿಹಾರ ಎಂದು ಸೂಚಿಸುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ 70ರಷ್ಟು ಮಂದಿ ಸಾಯುವ ಮೊದಲಿನ ಮೂರು ನಾಲ್ಕು ವಾರಗಳ ಅವಧಿಯಲ್ಲಿ ಖಿನ್ನತೆಗೆ ಒಳಗಾಗಿರುತ್ತಾರೆಂದು ಮನೋವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.

ಖಿನ್ನತೆಯನ್ನು ಗುರುತಿಸಿ ಔಷಧಿ, ಆಪ್ತ ಸಮಾಲೋಚನೆ, ಆಸರೆ ಇತ್ತು ಚಿಕಿತ್ಸೆ ನೀಡಿದರೆ ಆತ್ಮಹತ್ಯೆಯನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಅವಮಾನಿತರು, ಭಗ್ನಪ್ರೇಮಿಗಳು, ಸೋತವರು, ಸಾಲ ಮಾಡಿದವರೆಲ್ಲರೂ ಸಾಯಲು ಹೋಗುವುದಿಲ್ಲ. ಇದರ ಜೊತೆಗೆ ಖಿನ್ನತೆ ಸೇರಿಕೊಂಡರೆ ಅಂತಹವರು ಸಾಯಲು ಸಿದ್ಧರಾಗುತ್ತಾರೆ.ಆದ್ದರಿಂದ ಖಿನ್ನತೆಯನ್ನು ಗುರುತಿಸಿ ನಿಭಾಯಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.