ADVERTISEMENT

ಗಾಂಧೀಜಿ ಜತೆ ಹೋಲಿಕೆ ಸಲ್ಲ

ಡಾ.ಮುಮ್ತಾಜ್‌ ಅಲಿ ಖಾನ್ ಬೆಂಗಳೂರು
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಇತ್ತೀಚಿಗೆ ಒಬ್ಬ ಪ್ರಮುಖ ರಾಜಕೀಯ ಧುರೀಣ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮಹಾತ್ಮ ಗಾಂಧೀಜಿ ಅವರೊಂದಿಗೆ ಹೋಲಿಸಿದರು. ಇದರಿಂದ ತುಂಬ ಆಶ್ಚರ್ಯವಾಯಿತು ಮತ್ತು ದುಃಖವೂ ಆಯಿತು. ಗಾಂಧೀಜಿಅವರೊಂದಿಗೆ ಹೋಲಿಸುವ ವ್ಯಕ್ತಿ ಇನ್ನೂ ಜನ್ಮ ತಾಳಿಲ್ಲ. ಮುಂದೆ ಯಾರಾದರೂ ಹುಟ್ಟುತ್ತಾರೆ ಎಂಬುದೂ ಅನುಮಾನ.

ಗಾಂಧೀಜಿ ಯವರು ದೇಶದ ವಿಭಜನೆ ತಡೆಯಲು ಯತ್ನಿಸಿದ ವ್ಯಕ್ತಿ. ಪಾಕಿಸ್ತಾನ ರೂಪುಗೊಳ್ಳುವ ಸಂದರ್ಭದಲ್ಲಿ ಅವರಿಗೆ ಎಷ್ಟು ಪೆಟ್ಟುಗಳು ಬಿದ್ದವೋ, ಅವರನ್ನು ಎಷ್ಟರಮಟ್ಟಿಗೆ ಹೀನಾಯವಾಗಿ ಕಂಡರೋ, ಕಡೆಗೆ ಅವರನ್ನು ಕೊಂದೇ ಹಾಕಿದರು. ಸತ್ಯಕ್ಕೋಸ್ಕರ ಜೀವನವನ್ನೇ ಮುಡಿಪಿಟ್ಟ ಮಹಾತ್ಮಅವರು. ಹಿಂದೂ, ಮುಸ್ಲಿಂ ಏಕತೆಗೆ ಹೋರಾಟ ಮಾಡಿದರು. ಇಂದು ಇಡೀ ಜಗತ್ತು ಅವರಿಗೆ ಶರಣು.

ಗುಜರಾತಿನ ಮೋದಿಯವರನ್ನು ಗೌರವಿಸುವವರಲ್ಲಿ ನಾನೂ ಒಬ್ಬ. ಇಂದು ಗುಜರಾತನ್ನು ಈ ರಾಷ್ಟ್ರದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಿ ಇಡೀ ವಿಶ್ವವನ್ನೇ ವಿಸ್ಮಯಕ್ಕೆ ಗುರಿ ಮಾಡಿದಂತಹವರು ಮೋದಿಯವರು. ಗೋಧ್ರಾ ನಂತರ ಗುಜರಾತಿನಲ್ಲಿ ಆದ ದುರಂತವನ್ನು ಮರೆಯಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮನವಿ ಮಾಡಿದ್ದಾರೆ. ಖಂಡಿತ ಅವರ ಮನವಿಯನ್ನು ಸ್ವೀಕಾರ ಮಾಡಬೇಕು.

ಮೋದಿ ಅವರು ಅಭಿವೃದ್ಧಿ ವಿಷಯದಲ್ಲಿ ಎಲ್ಲಾ ರಾಜ್ಯಗಳಿಗೆ ಮಾದರಿ. ಆದರೆ ಅವರು ಮುಸ್ಲಿಂ ವಿರೋಧಿ ಎಂಬ ಮಾತು ಇನ್ನೂ ಚಲಾವಣೆಯಲ್ಲಿದೆ. ಸ್ವಲ್ಪ ಕಾಲದ ನಂತರ ಅದನ್ನೂ ಜನ ಮರೆಯುತ್ತಾರೆ. ಆದರೆ ಮೋದಿಯವರು ಮೋದಿಯವರೇ ಮತ್ತು ಗಾಂಧೀಜಿ ಅವರು ಮಹಾತ್ಮರೇ. ನರೇಂದ್ರ ಮೋದಿ ಮಹಾತ್ಮರಾಗಲಿಕ್ಕೆ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.